ಮಂಗಳೂರು : ಕೊರಗ ಸಮುದಾಯಕ್ಕೆ ಸೇರಿದ ದೈವ ಕೊರಗಜ್ಜನನ್ನು ಶ್ರೀಮಂತರು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಶ್ರೀಮಂತರ ಮನೆಗಳ ಗೋಡೆಗಳಲ್ಲಿ ಕೊರಗಜ್ಜನ ಚಿತ್ರಗಳಿವೆ, ಆದರೆ ಕೊರಗರ ಮನೆಗಳಿಗೆ ಗೋಡೆಗಳೇ ಇಲ್ಲ, ಕೊರಗರು ಗುಡಿಸಲಿನಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಸಿಪಿಎಂ ಪಕ್ಷದ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಕರ್ನಾಟಕದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಹಮ್ಮಿಕೊಂಡ ಕೊರಗ ಸಮುದಾಯದ ಆದಿವಾಸಿ ಆಕ್ರೋಶ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಶ್ರೀಮಂತರು ಕೊರಗಜ್ಜನ ಮುಂದೆ ಅಡ್ಡಬಿದ್ದು ಆಶೀರ್ವಾದ ಪಡೆಯುತ್ತ ನಿಜಜೀವನದಲ್ಲಿ ಕೊರಗರನ್ನು ತುಳಿಯುತ್ತಿದ್ದಾರೆ, ಅವರು ಕೊರಗಜ್ಜನನ್ನು ಆರಾಧಿಸುತ್ತಾ ಕೊರಗರನ್ನು ಜಾನುವಾರುಗಳ ರೀತಿ ನಡೆಸಿಕೊಳ್ಳುತ್ತಿದ್ದಾರೆ, ದೇವರ ಮಕ್ಕಳಾದ ಕೊರಗರು ಅಪೌಷ್ಠಿಕತೆ ಮತ್ತು ಹಸಿವಿನಿಂದ ನರಳುತ್ತಿದ್ದಾರೆ ಎಂದು ಕಿಡಿಕಾರಿದರು.
ಶತಶತಮಾನಗಳಿಂದ ಕೊರಗರ ಮೇಲೆ ದಬ್ಬಾಳಿಕೆ, ಶೋಷಣೆ ನಡೆಯುತ್ತಾ ಬಂದಿದೆ ಎಂದ ಅವರು, ಭೂಮಾಲೀಕರು, ಪಾಳೇಗಾರರು ಮತ್ತು ಬಂಡವಾಳಶಾಹಿಗಳು ಕೊರಗ ಸಮುದಾಯದ ಜನರ ಮೇಲೆ ಶೋಷಣೆ ಮಾಡುತ್ತಿದ್ದಾರೆ, ಕೊರಗ ಸಮುದಾಯದ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸಲಾಗಿದೆ ಎಂದರು.
ಕೆಲ ವರ್ಷಗಳ ಹಿಂದೆ ಕರ್ನಾಟಕದಲ್ಲಿ 20 ಸಾವಿರದಷ್ಟಿದ್ದ ಕೊರಗರ ಜನಸಂಖ್ಯೆ ಈಗ 16 ಸಾವಿರಕ್ಕೆ ಕುಸಿದಿದೆ, ಕೊರಗ ಸಮುದಾಯದಲ್ಲಿ ಶಿಶುಮರಣ ಪ್ರಮಾಣ ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿ ಕೊರಗರ ಜನಸಂಖ್ಯೆ 12 ಸಾವಿರಕ್ಕೆ ಕುಸಿಯು ಸಾಧ್ಯತೆ ಇದೆ, ನಮ್ಮ ಜೊತೆ ಬದುಕಿದ್ದ ಒಂದು ಸಮುದಾಯ ನಮ್ಮ ಕಣ್ಣೆದುರಲ್ಲೇ ನಶಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೊರಗ ಸಮುದಾಯದಲ್ಲಿ ಅಪೌಷ್ಠಿಕತೆ ಮತ್ತು ಅನಾರೋಗ್ಯ ಭಾದಿಸುತ್ತಿದ್ದು, ಕೊರಗ ಮತ್ತು ಆದಿವಾಸಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ, ಇದನ್ನು ತೊಡೆದು ಹಾಕಲು ಸರ್ಕಾರ ನಿರ್ದಿಷ್ಟ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಕೇರಳದ ಪಿಣರಾಯಿ ಸರ್ಕಾರ ಕೊರಗ ಸಮುದಾಯದವನ್ನು ಗುರುತಿಸಿ ಅವರ ರಕ್ಷಣೆ ಮತ್ತು ಅಭಿವೃದ್ಧಿಗೆ ಯೋಜನೆ ರೂಪಿಸಿದಂತೆ ಕರ್ನಾಟಕ ಸರ್ಕಾರ ಕೂಡ ಕೊರಗ ಸಮುದಾಯಕ್ಕೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಬೇಕು ಎಂದು ಬೃಂದಾ ಕಾರಟ್ ಒತ್ತಾಯಿಸಿದರು. ಆದಿವಾಸಿಗಳ ಹಕ್ಕುಗಳಿಗಾಗಿ ಎಡರಂಗದ ಸಂಸದರು ಸಂಸತ್‌ನಲ್ಲಿ ಧ್ವನಿ ಎತ್ತಲಿದ್ದಾರೆ ಎಂದು ಭರವಸೆ ನೀಡಿದರು.
ಹೋರಾಟವೇ ನಮ್ಮ ಅಸ್ತ್ರ ಎಂದ ಅವರು ನಮ್ಮ ಸಾಂವಿಧಾನಿಕ ಹಕ್ಕು, ಅವಕಾಶಗಳಿಗಾಗಿ ಒಗ್ಗಟ್ಟಾಗಿ ಹೋರಾಡುತ್ತೇವೆ, ಆ ಅಸ್ತ್ರವನ್ನು ನಮ್ಮಿಂದ ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ ಎಂದರು. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಆಂತರಿಕ ಜಗಳದಲ್ಲಿ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದ ಬೃಂದಾ ಕಾರಟ್, ನಾವು ಶೋಷಣೆ ದಬ್ಬಾಳಿಕೆ ವಿರುದ್ಧ ಕುಸ್ತಿ ಮಾಡುತ್ತಿದ್ದರೆ ಸಿದ್ದರಾಮಯ್ಯ ಮತ್ತು ಡಿಕೆಶಿ ಕುರ್ಚಿಗಾಗಿ ಕುಸ್ತಿ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ನವೀನ್ ಸೂರಿಂಜೆ ಬರೆದ “ಕೊರಗರು ತುಳುನಾಡಿನ ಮಾತೃ ಸಮುದಾಯ” ಪುಸ್ತಕವನ್ನು ಬೃಂದಾ ಕಾರಟ್ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಕರ್ನಾಟಕದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕ ಎಸ್.ವೈ ಗುರುಶಾಂತ್, ಸಮಿತಿ ಸದಸ್ಯ ಶೇಖರ್ ವಾಮಂಜೂರು, ಸಿಪಿಎಂ ಮುಖಂಡ ಮುನೀರ್ ಕಾಟಿಪಳ್ಳ, ಶ್ರೀಧರ್ ನಾಡ, ಡಾ.ಕೃಷ್ಣಪ್ಪ ಕೊಂಚಾಡಿ, ಕೆ. ಕರಿಯ, ರಶ್ಮಿ ವಾಮಂಜೂರು ಮತ್ತು ಇತರರು ಉಪಸ್ಥಿತರಿದ್ದರು.