ಹಾವೇರಿ: ಲಾರಿ ಅಪಘಾತದಲ್ಲಿ ಮೃತಪಟ್ಟ 10 ಜನರ ಅಂತ್ಯಕ್ರಿಯೆಯು ಸವಣೂರು ಪಟ್ಟಣದ ಖಬರಸ್ತಾನಗಳಲ್ಲಿ ನಡೆಯಿತು.
ಅದಕ್ಕೂ ಮುನ್ನ ಪಟ್ಟಣಕ್ಕೆ ಶಾಸಕ ಯಾಸೀರಖಾನ್ ಪಠಾಣ ನೇತೃತ್ವದಲ್ಲಿ ಎಲ್ಲ ಮೃತದೇಹಗಳನ್ನು ಘಟನಾ ಸ್ಥಳದಿಂದ ತರಲಾಯಿತು.
ಮೃತದೇಹಗಳನ್ನು ಹೊತ್ತ ವಾಹನ ಪಟ್ಟಣ ತಲುಪುತ್ತಿದ್ದಂತೆ ದಾರಿ ಉದ್ದಕ್ಕೂ ಸಂಬಂಧಿಕರು, ನಿವಾಸಿಗಳು, ಸಾವಿರಾರು ಸಂಖ್ಯೆಯಲ್ಲಿ ನಿಂತು ಪಾರ್ಥಿವ ಶರೀರಗಳ ವೀಕ್ಷಣೆ ಮಾಡಿದರು. ನಂತರ ಮೃತರ ಮನೆಗಳಿಗೆ ಪಾರ್ಥಿವ ಶರೀರಗಳನ್ನು ತಗೆದುಕೊಂಡು ಹೋಗಲಾಯಿತು. ಮನೆಯಲ್ಲಿ ಮುಸ್ಲಿಂ ಸಂಪ್ರದಾಯದಂತೆ ವಿಧಿವಿಧಾನಗಳನ್ನು ಪೂರೈಸಲಾಯಿತು. ಈ ವೇಳೆ ಮೃತ ಕುಟುಂಬದ ಸಂಬಂಧಿಕರ ಆಕ್ರಂದನ ಮಗಿಲು ಮುಟ್ಟಿತ್ತು.
ಬಳಿಕ ಅಲ್ಲಿಂದ ಮೃತದೇಹಗಳನ್ನು ಈದ್ಗಾ ಮೈದಾನಕ್ಕೆ ತರಲಾಯಿತು. ಈದ್ಗಾ ಮೈದಾನದಲ್ಲಿ ಸಾಲಾಗಿ ಮೃತದೇಹಗಳನ್ನು ಪ್ರಾರ್ಥನೆ ಸಲ್ಲಿಸಲಾಯಿತು.
ಸವಣೂರಿನಿಂದ ಹಣ್ಣು, ತರಕಾರಿ ತುಂಬಿಕೊಂಡು ಕುಮಟಾದ ಸಂತೆಗೆ ತೆರಳುತ್ತಿದ್ದ ಲಾರಿಯೊಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದ ಅರಬೈಲ್ ಘಟ್ಟದ ಕಾಗೇರಿ ಪೆಟ್ರೋಲ್ ಬಂಕ್ ಬಳಿ ಕಂದಕಕ್ಕೆ ಉರುಳಿ ಬಿದ್ದಿದ್ದು, ಘಟನೆಯಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ.