ಬೆಂಗಳೂರು: ನಟ ದರ್ಶನ್ ಅವರ ಬಳಿಯಿರುವ ಗನ್ ಲೈಸೆನ್ಸ್ ತಾತ್ಕಾಲಿಕವಾಗಿ ಅಮಾನತುಗೊಳಿಸಿ ಬೆಂಗಳೂರು ಪೊಲೀಸ್ ಆಡಳಿತ ವಿಭಾಗ ಆದೇಶಿಸಿದೆ.
ಹತ್ಯೆ ಪ್ರಕರಣ ಮುಗಿಯುವವರೆಗೂ ಲೈಸೆನ್ಸ್ ಅಮಾನತು ಮಾಡಲಾಗಿದ್ದು, ಗನ್ ವಶಕ್ಕೆ ಪಡೆದುಕೊಳ್ಳುವಂತೆ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರಿಗೆ ಸೂಚಿಸಲಾಗಿದೆ.
ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜಾಮೀನಿನ ಮೇಲೆ ಹೊರಗಿರುವ ನೀವು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ನಿಮ್ಮ ಬಳಿಯಿರುವ ಲೈಸೆನ್ಸ್ ಹೊಂದಿರುವ ಗನ್ ಬಳಸಿ ಸಾಕ್ಷಿಗಳನ್ನು ಬೆದರಿಸುವ ಬಗ್ಗೆ ಅನುಮಾನಗಳಿವೆ. ನಿಮ್ಮ ಗನ್ ಲೈಸೆನ್ಸ್ ರದ್ದು ಮಾಡದಿರಲು ಕಾರಣ ನೀಡಿ ಎಂದು ದರ್ಶನ್ ಅವರಿಗೆ ಈ ಹಿಂದೆ ಬೆಂಗಳೂರು ಪೊಲೀಸ್ ಆಡಳಿತ ವಿಭಾಗದ ಡಿಸಿಪಿ ಪದ್ಮಿನಿ ಸಾಹೂ ನೋಟಿಸ್ ನೀಡಿದ್ದರು. ನೋಟಿಸ್ ಗೆ ಉತ್ತರಿಸಿದ್ದ ದರ್ಶನ್, “ತಾವು ಓರ್ವ ಸೆಲೆಬ್ರಿಟಿ, ತಾವು ಹೋಗುವ ಕಡೆಗಳಲ್ಲಿ ಸಾಕಷ್ಟು ಜನ ಸೇರುತ್ತಾರೆ. ಈ ವೇಳೆ ತಮ್ಮ ಆತ್ಮರಕ್ಷಣೆಗಾಗಿ ಗನ್ ಅವಶ್ಯಕತೆಯಿದೆ” ಎಂದಿದ್ದರು.
ದರ್ಶನ್ ನೀಡಿದ್ದ ಕಾರಣ ಪರಿಗಣಿಸದ ಬೆಂಗಳೂರು ಪೊಲೀಸ್ ಆಡಳಿತ ವಿಭಾಗ, ಮುನ್ನೆಚ್ಚರಿಕಾ ಕ್ರಮವಾಗಿ ದರ್ಶನ್ ಅವರ ಗನ್ ಲೈಸೆನ್ಸ್ ತಾತ್ಕಾಲಿಕ ಅಮಾನತು ಮಾಡಿದೆ.