ಜೌನ್ಪುರ: ಭಾರತ ಕ್ರಿಕೆಟ್ ತಂಡದ ಆಟಗಾರ ರಿಂಕು ಸಿಂಗ್ ಅವರು ಸಮಾಜವಾದಿ ಪಕ್ಷದ ಯುವ ಸಂಸದೆ ಪ್ರಿಯಾ ಸರೋಜ್ ಅವರನ್ನು ವರಿಸಲಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪ್ರಿಯಾ ಸರೋಜ್ ಅವರ ತಂದೆ ಸಮಾಜವಾದಿ ಪಕ್ಷದ ಶಾಸಕ ತೂಫಾನಿ ಸರೋಜ್ ಅವರು ಈ ವಿಷಯವನ್ನು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ.
‘ಎರಡೂ ಕುಟುಂಬಗಳು ಈ ಸಂಬಂಧ ಕುರಿತು ಮಾತುಕತೆ ಪೂರ್ಣಗೊಳಿಸಿವೆ. ರಿಂಕು ಸಿಂಗ್ ಅವರ ಪಾಲಕರನ್ನು ಜ. 16ರಂದು ಅಲಿಘಡದಲ್ಲಿರುವ ಭೇಟಿ ಮಾಡಿ ಮಾತುಕತೆ ನಡೆಸಲಾಗಿದೆ. ಆದರೆ ನಿಶ್ಚಿತಾರ್ಯ ಮತ್ತು ಮದುವೆ ಕಾರ್ಯಕ್ರಮಗಳ ದಿನಾಂಕ ನಿಗದಿ ಇನ್ನಷ್ಟೇ ಆಗಬೇಕಿದೆ’ ಎಂದು ತಿಳಿಸಿದ್ದಾರೆ.
‘ಕಳೆದ ಒಂದು ವರ್ಷದಿಂದ ರಿಂಕು ಹಾಗೂ ಪ್ರಿಯಾ ಪರಸ್ಪರ ಪರಿಚಿತರಾಗಿ, ಮೆಚ್ಚಿದ್ದರು. ಈ ಸಂಬಂಧಕ್ಕೆ ಎರಡೂ ಕುಟುಂಬಗಳ ಹಿರಿಯರ ಒಪ್ಪಿಗೆ ಬೇಕಿತ್ತು. ಇದೀಗ ಎರಡೂ ಕುಟುಂಬಗಳು ಒಪ್ಪಿವೆ’ ಎಂದು ಮೂರು ಬಾರಿ ಸಂಸದರಾಗಿರುವ ತೂಫಾನಿ ಸಿಂಗ್ ತಿಳಿಸಿದ್ದಾರೆ.
‘ಪ್ರಿಯಾ ಅವರ ಸ್ನೇಹಿತೆಯ ತಂದೆಯೂ ಕ್ರಿಕೆಟರ್ ಆಗಿದ್ದಾರೆ. ಅವರ ಮೂಲಕ ಪ್ರಿಯಾಗೆ ರಿಂಕು ಅವರ ಪರಿಚಯವಾಗಿದೆ. ಈ ಇಬ್ಬರ ನಿಶ್ಚಿತಾರ್ಯ ಹಾಗೂ ಇನ್ನಿತರ ವಿವಾಹ ಸಂಬಂಧಿತ ಕಾರ್ಯಕ್ರಮಗಳು ಸಂಸತ್ ಅಧಿವೇಶನದ ನಂತರ ನಿರ್ಧಾರವಾಗಲಿವೆ. ನಿಶ್ಚಿತಾರ್ಥವನ್ನು ಲಖನೌನದಲ್ಲಿ ನಡೆಸಲು ಎರಡೂ ಕುಟುಂಬಗಳು ನಿರ್ಧರಿಸಿವೆ’ ಎಂದು ತಿಳಿಸಿದ್ದಾರೆ.