ಬೆಳಗಾವಿ:: ಕುರಾನ್ ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಕೊಲ್ಕತ್ತಾದ ಬಿಜೆಪಿ ನಾಯಕಿ ನಾಜಿಯಾ ಖಾನ್, ಆಯೋಜಕರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಎಸ್ ಡಿಪಿಐ ನಾಯಕ ಅಫ್ಸರ್ ಕೊಡ್ಲಿಪೇಟೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಎಕ್ಸ್ ಮಾಡಿರುವ ಅವರು, ಮನುವಾದದ ಗುಲಾಮಗಿರಿಗೆ ಒಪ್ಪಿಸಿಕೊಂಡಿರುವ ಕೊಲ್ಕತ್ತಾದ ಬಿಜೆಪಿ ನಾಯಕಿ ನಾಜಿಯಾ ಖಾನ್ ಕರ್ನಾಟಕದ ಬೆಳಗಾವಿಗೆ ಬಂದು ದ್ವೇಷ ಭಾಷಣ ಮಾಡಿದ್ದಾರೆ. ಕುರಾನ್ ಮತ್ತು ಮುಸ್ಲಿಮರ ವಿರುದ್ಧ ಅಸಹ್ಯ ಹುಟ್ಟಿಸುವಂತ ಮಾತುಗಳನ್ನಾಡುವುದರ ಜೊತೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಹಳ ಕೆಟ್ಟ ಆಪಾದನೆಗಳನ್ನು ಮಾಡಿದ್ದಾರೆ. ಸಿದ್ದರಾಮಯ್ಯ ಕಾಮುಕರೆಂದೂ, ಸಾಕಷ್ಟು ಮಹಿಳೆಯರು, ಮಹಿಳಾ ಪತ್ರಕರ್ತರೊಂದಿಗೆ ಅಶ್ಲೀಲವಾಗಿ ನಡೆದುಕೊಂಡಿದ್ದಾರೆಂದೂ ಆರೋಪಿಸಿದ್ದಾರೆ. ಇಷ್ಟಾದರೂ ಈ ಮಹಿಳೆಯ ವಿರುದ್ಧ ಸರ್ಕಾರ ಇಲ್ಲಿಯವರೆಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಇಂತಹ ಹೇಳಿಕೆ ನೀಡುವವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸರ್ಕಾರ ಇವರಿಗೆ ಅದೇಕೆ ಇಷ್ಟು ಹೆದರುತ್ತದೆ? ಅನ್ನುವುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆಯಾಗಿಯೇ ಉಳಿದಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ದ್ವೇಷ ಭಾಷಣ, ಕೋಮುವಾದದ ಕೇಂದ್ರ ಬಿಂದುವಾಗುತ್ತಿರುವುದಕ್ಕೆ ಸಿದ್ದರಾಮಯ್ಯ ಸರ್ಕಾರದ ಅಸಮರ್ಥತೆಯೇ ಕಾರಣ. ದ್ವೇಷ ಭಾಷಣ ಮಾಡಿರುವ ಮತ್ತು ಈ ಕಾರ್ಯಕ್ರಮ ಆಯೋಜಕರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿ ಎಮದು ಒತ್ತಾಯಿಸಿದ್ದಾರೆ.