ಕರ್ನಾಟಕ ದರೋಡೆ ರಾಜ್ಯ, ಜನರು ಆತಂಕದಲ್ಲಿ ಬದುಕುತ್ತಿದ್ದಾರೆ: ಆರ್‌. ಅಶೋಕ್

Prasthutha|

ಬೆಂಗಳೂರು: ಕರ್ನಾಟಕ ದರೋಡೆ ರಾಜ್ಯವಾಗಿ ಬದಲಾಗಿದ್ದು, ಜನರು ಆತಂಕದಲ್ಲಿ ಬದುಕುತ್ತಿದ್ದಾರೆ. ಜನರ ರಕ್ಷಣೆಯನ್ನು ಮಾಡುವವರೇ ಇಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೀದರ್‌ ನಲ್ಲಿ ಬ್ಯಾಂಕ್‌ ನ ಹಣದ ದರೋಡೆ ಹಾಗೂ ಸಿಬ್ಬಂದಿ ಕೊಲೆ ನಡೆದಿದೆ. ಮಂಗಳೂರಿನಲ್ಲಿ ಹಾಲಿವುಡ್‌ ಸಿನಿಮಾ ಶೈಲಿಯಲ್ಲಿ ₹15 ಕೋಟಿ ಬ್ಯಾಂಕ್‌ ಹಣ ಲೂಟಿಯಾಗಿದೆ. ರಾಜ್ಯದ ಪೊಲೀಸರ ಬಗ್ಗೆ ಯಾರಿಗೂ ಭಯವಿಲ್ಲ. ಮುಖ್ಯಮಂತ್ರಿಗೆ ಪೊಲೀಸ್‌ ಅಧಿಕಾರಿಗಳ ಮೇಲೆ ಎಷ್ಟು ಹಿಡಿತ ಇದೆ ಎಂದು ಇದರಿಂದ ತಿಳಿಯುತ್ತದೆ. ರಾಜ್ಯದ ಕಾನೂನು ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂದು ಗೊತ್ತಾಗಿದೆ’ ಎಂದರು.

‘ಬೇರೆ ರಾಜ್ಯಗಳಿಂದ ಕಳ್ಳರು ಬಂದು ದರೋಡೆ ಮಾಡಿಕೊಂಡು ಬಸ್ಸು, ರೈಲಿನಲ್ಲಿ ಹೋಗುತ್ತಿದ್ದಾರೆ. ಜನರು ಅವರ ರಕ್ಷಣೆಯನ್ನು ಅವರೇ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಪೊಲೀಸರ ಕೈಯಲ್ಲಿ ಪಿಸ್ತೂಲ್‌ ಇಲ್ಲ. ಆದರೆ, ದರೋಡೆ ಮಾಡುವವರ ಕೈಯಲ್ಲಿ ಆಧುನಿಕ ಶಸ್ತ್ರಾಸ್ತ್ರಗಳಿವೆ’ ಎಂದರು.

- Advertisement -

‘ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಎಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ, ಸಿದ್ದರಾಮಯ್ಯ ಎಷ್ಟು ಅನುದಾನ ನೀಡಿದ್ದಾರೆ ಎಂದು ಶ್ವೇತಪತ್ರ ಬಿಡುಗಡೆ ಮಾಡಲಿ. ಬಿಜೆಪಿ ಅವಧಿಯಲ್ಲಿ ಎಷ್ಟು ಸಾಲ ಮಾಡಲಾಗಿದೆ, ಕಾಂಗ್ರೆಸ್‌ ಅವಧಿಯಲ್ಲಿ 60 ವರ್ಷಗಳಲ್ಲಿ ಎಷ್ಟು ಸಾಲ ಮಾಡಲಾಗಿದೆ ಎಂದೂ ತಿಳಿಸಲಿ ಎಂದು ಅಶೋಕ ಸವಾಲೆಸೆದರು.

‘ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳು ಹೆಚ್ಚಿವೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರ ಬದುಕಿಗೆ ಗ್ಯಾರಂಟಿ ಇಲ್ಲ. ಇಂತಹ ಪರಿಸ್ಥಿತಿಯಲ್ಲೂ ಸರ್ಕಾರ ದರ ಏರಿಕೆ ಮಾಡುತ್ತಿದೆ. ಈ ರೀತಿ ಮಾಡುವ ಬದಲು ಒಂದೇ ಬಾರಿಗೆ ದರ ಏರಿಕೆ ಮಾಡಲಿ’ ಎಂದರು.



Join Whatsapp