ಜೆರುಸಲೇಂ: ಹಮಾಸ್ ನಡುವಿನ ಕದನ ವಿರಾಮ ಮತ್ತು ಗಾಝಾ ಪಟ್ಟಿಯಲ್ಲಿ ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವವರ ಬಿಡುಗಡೆಗಾಗಿ ಮಾಡಿರುವ ಒಪ್ಪಂದವನ್ನು ಇಸ್ರೇಲ್ ಸಂಪುಟ ಅನುಮೋದಿಸಿದೆ.
ಇಸ್ರೇಲಿ ಪಡೆಗಳು 46,788ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರನ್ನು ಕೊಂದು 110,453 ಜನರನ್ನು ಗಾಯಗೊಳಿಸಿದ 460 ದಿನಗಳಿಗೂ ಹೆಚ್ಚು ಕಾಲದ ಆಕ್ರಮಣದ ನಂತರ ಕದನ ವಿರಾಮಕ್ಕೆ ನೆತನ್ಯಾಹು ಸರ್ಕಾರ ಮುಂದಾಗಿದೆ.
ಆರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಂಪುಟ ಸಭೆಯ ನಂತರ ಇಸ್ರೇಲ್ ಸರ್ಕಾರ ಶನಿವಾರ (ಜ.17) ಬೆಳಗಿನ ಜಾವ ಕದನ ವಿರಾಮ ಒಪ್ಪಂದವನ್ನು ಅಂಗೀಕರಿಸಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
“ಒತ್ತೆಯಾಳುನ್ನು ಬಿಡುಗಡೆ ಮಾಡುವ ಒಪ್ಪಂದವನ್ನು ಸರ್ಕಾರ ಅನುಮೋದಿಸಿದೆ. ಒತ್ತೆಯಾಳುಗಳ ಬಿಡುಗಡೆ ಕಾರ್ಯ ಭಾನುವಾರದಿಂದ (ಜ.19) ಜಾರಿಗೆ ಬರಲಿದೆ ಎಂದು” ನೆತನ್ಯಾಹು ಕಚೇರಿ ಹೇಳಿದೆ.
ಕದನ ವಿರಾಮ ಒಪ್ಪಂದ ಘೋಷಣೆಯಾದ ಬೆನ್ನಲ್ಲೇ ಗಾಝಾದ ವಿವಿದೆಢೆ ಇಸ್ರೇಲ್ ದಾಳಿ ನಡೆಸಿದ್ದು, ಇಂದು (ಶನಿವಾರ) ಮುಂಜಾನೆ ಐವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕದನ ವಿರಾಮ ಒಪ್ಪಂದ ಘೋಷಣೆಯಾದ ಬಳಿಕ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಈವರೆಗೆ 119 ಮಂದಿ ಸಾವಿಗೀಡಾಗಿದ್ದಾರೆ ಎಂದು ಗಾಝಾ ಆರೋಗ್ಯ ಸಚಿವಾಲಯ ತಿಳಿಸಿದೆ.
ಜನರು ಕದನ ವಿರಾಮ ಘೋಷಣೆ ಒಪ್ಪಂದದ ಸಂಭ್ರಮದಲ್ಲಿ ಇದ್ದಾಗಲೇ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ ಎಂದು ಗಾಝಾದಲ್ಲಿನ ಪ್ಯಾಲೆಸ್ಟೀನಿಯನ್ನರು ತಿಳಿಸಿದ್ದಾರೆ.
ಗಾಝಾ ಪಟ್ಟಿಯಲ್ಲಿ ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವವರ ಬಿಡುಗಡೆ ಮಾಡಲು ಒಪ್ಪಂದ ಆಗಿದೆ ಎಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಶುಕ್ರವಾರ ದೃಢಪಡಿಸಿದ್ದರು.
ಒಪ್ಪಂದದ ಪ್ರಕಾರ, ಹಮಾಸ್ ಒತ್ತೆ ಇರಿಸಿಕೊಂಡಿರುವ 33 ಮಂದಿ ಬಿಡುಗಡೆಗೆ ಪ್ರತಿಯಾಗಿ, ಇಸ್ರೇಲ್ ನ ಬಂಧನದಲ್ಲಿರುವ ನೂರಾರು ಪ್ಯಾಲೆಸ್ಟೀನಿಯರನ್ನು ಮುಂದಿನ ಆರು ವಾರಗಳಲ್ಲಿ ಬಿಡುಗಡೆ ಮಾಡಬೇಕಿದೆ. ಜೊತೆಗೆ, ಈ ಒಪ್ಪಂದದಿಂದ ಸ್ಥಳಾಂತರಗೊಂಡ ಸಾವಿರಾರು ಜನರು ಗಾಝಾದಲ್ಲಿ ಅಳಿದುಳಿದ ತಮ್ಮ ಮನೆಗಳಿಗೆ ಪುನಃ ತೆರಳಲು ಸಾಧ್ಯವಾಗಲಿದೆ.