ಬೆಂಗಳೂರು: ಹಲವು ವರ್ಷಗಳ ಬೇಡಿಕೆ ಬಳಿಕ ಅಮೆರಿಕ ದೇಶವು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ತನ್ನ ಕಾನ್ಸುಲೇಟ್ (ದೂತಾವಾಸ ಕಚೇರಿ) ಅನ್ನು ಆರಂಭಿಸಿದೆ. ಇತ್ತ ರಾಜ್ಯ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರಿಂದ ಇದರ ಕ್ರೆಡಿಟ್ ವಾರ್ ಆರಂಭವಾಗಿದ್ದು, “ಯಾರೋ ಕಟ್ಟಿದ ಮನೆಗೆ, ಬೇರೆ ಯಾರೋ ಗೃಹಪ್ರವೇಶ” ಎಂದು ಜೆಡಿಎಸ್ ಟ್ವೀಟ್ ಮಾಡಿದೆ.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಅಮೆರಿಕ ಕಾನ್ಸುಲೇಟ್ ಕಾರ್ಯಕ್ರಮ ನಡೆಯಿತು. ಈ ಬೆನ್ನಲ್ಲೆ ಜೆಡಿಎಸ್ ಟ್ವೀಟ್ ಮಾಡಿದೆ. ” 2006 ಮತ್ತು 2018ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಎಚ್ಡಿ ಕುಮಾರಸ್ವಾಮಿ ಅವರು ಅಮೆರಿಕಾದ ರಾಯಭಾರಿ ಕನ್ನಿತ್ ಜಸ್ಟರ್ ಅವರನ್ನು ಭೇಟಿಯಾಗಿ ಬೆಂಗಳೂರಿನಲ್ಲಿ ಅಮೆರಿಕಾದ ಕಾನ್ಸುಲೇಟ್ ಸ್ಥಾಪಿಸಬೇಕು ಎಂದು ಮನವಿ ಸಲ್ಲಿಸಿದ್ದರು. ಅಂದೇ ಬ್ರ್ಯಾಂಡ್ ಬೆಂಗಳೂರಿನ ಕನಸು ಸಾಕಾರಗೊಳಿಸುವ ಅಭಿವೃದ್ಧಿಯ ಪ್ರಗತಿ ಪಥದಲ್ಲಿ ಮುನ್ನುಡಿ ಬರೆದಿದ್ದರು. ಕುಮಾರಸ್ವಾಮಿಯವರ ಪ್ರಯತ್ನವೇ ಇಂದು ಬೆಂಗಳೂರಿನಲ್ಲಿ ಯುಎಸ್ ಕಾನ್ಸುಲೇಟ್ ಕಾರ್ಯಾರಂಭ ಮಾಡುತ್ತಿದೆ ” ಎಂದು ಹೇಳಿದೆ.
“ಯಾರೋ ಕಟ್ಟಿದ ಮನೆಗೆ, ಬೇರೆ ಯಾರೋ ಗೃಹಪ್ರವೇಶ ಮಾಡಿದರು ಎನ್ನುವಂತೆ, ಕರ್ನಾಟಕ ಕಾಂಗ್ರೆಸ್ ಸರ್ಕಾರ ಈಗ ಅದರ ಕ್ರೆಡಿಟ್ ತಮ್ಮದು ಎಂದು ಬಿಟ್ಟಿ ಪ್ರಚಾರ ಪಡೆಯುವುದಕ್ಕೆ ನಾಚಿಕೆಯಾಗಬೇಕು. ಪ್ರಿಯಾಂಕ್ ಖರ್ಗೆ ಅವರೇ ಸ್ವಜನ ಪಕ್ಷಪಾತ, ಅಧಿಕಾರ ದುರ್ಬಳಕೆ, ರಾಜಕೀಯ ಪ್ರಭಾವ ಬಳಸಿಕೊಂಡು ನಿಮ್ಮ ಕುಟುಂಬದ ಸಿದ್ಧಾರ್ಥ್ ವಿಹಾರ ಟ್ರಸ್ಟ್ಗೆ 5 ಎಕರೆ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ನಲ್ಲಿ ಜಮೀನು ಹಂಚಿಕೆ ಮಾಡಿಸಿಕೊಂಡಂತೆ ಅಲ್ಲ ” ಎಂದು ಟ್ವೀಟ್ ಮಾಡಿದೆ.
” ಯುಎಸ್ ಕಾನ್ಸುಲೇಟ್ ಕಚೇರಿ ಬೆಂಗಳೂರಿನಲ್ಲಿ ಸ್ಥಾಪನೆಯಾಗಿರುವುದು ಕುಮಾರಸ್ವಾಮಿಯವರ ದೃಢ ನಿರ್ಧಾರ ಮತ್ತು ಒತ್ತಾಸೆಯ ಪ್ರತಿಫಲ. ಅದನ್ನು ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರು ಮರೆಯಬಾರದು ” ಎಂದು ಜೆಡಿಎಸ್ ಹೇಳಿದೆ.