ನವದೆಹಲಿ: ರಾಮ ಮಂದಿರದ ಪ್ರತಿಷ್ಠಾಪನೆಯ ನಂತರ ಭಾರತಕ್ಕೆ “ನಿಜವಾದ ಸ್ವಾತಂತ್ರ್ಯ” ಸಿಕ್ಕಿದೆ ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ದೇಶದ್ರೋಹಕ್ಕೆ ಸಮಾನವಾಗಿದೆ ಮತ್ತು ಇದು ಪ್ರತಿಯೋರ್ವ ಭಾರತೀಯನಿಗೆ ಮಾಡಿದ ಅವಮಾನವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ಧಾಳಿ ನಡೆಸಿದ್ದಾರೆ.
ಇಂದು ಕಾಂಗ್ರೆಸ್ ನ ನೂತನ ಪ್ರಧಾನ ಕಚೇರಿ, ಇಂದಿರಾ ಗಾಂಧಿ ಭವನ ಉದ್ಘಾಟನೆಯ ನಂತರ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಜನರು ಅಂತಹ “ಅಸಂಬದ್ಧ” ಮಾತುಗಳನ್ನು ಕೇಳುವುದನ್ನು ನಿಲ್ಲಿಸುವ ಸಮಯ ಬಂದಿದೆ ಎಂದರು.
“ಮೋಹನ್ ಭಾಗವತ್ ಅವರು ಸ್ವಾತಂತ್ರ್ಯ ಚಳುವಳಿ ಮತ್ತು ಸಂವಿಧಾನದ ಬಗ್ಗೆ ತಮ್ಮ ಅಭಿಪ್ರಾಯವನ್ನು ದೇಶಕ್ಕೆ ಹೇಳುವ ಧೈರ್ಯ ಹೊಂದಿದ್ದಾರೆ. ಅವರು ನಿನ್ನೆ ಹೇಳಿದ್ದು ದೇಶದ್ರೋಹ… ಏಕೆಂದರೆ ಅವರು ಸಂವಿಧಾನ ಅಮಾನ್ಯವಾಗಿದೆ ಮತ್ತು ಬ್ರಿಟಿಷರ ವಿರುದ್ಧದ ಹೋರಾಟವೂ ಅಮಾನ್ಯ ಎಂದು ಹೇಳುತ್ತಿದ್ದಾರೆ” ಎಂದರು.
“ಇದನ್ನು ಸಾರ್ವಜನಿಕವಾಗಿ ಹೇಳುವ ದಿಟ್ಟತನ ಅವರಿಗೆ ಇದೆ. ಬೇರೆ ಯಾವುದೇ ದೇಶದಲ್ಲಿ ಈ ರೀತಿ ಹೇಳಿದ್ದರೆ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ಇದು ಸತ್ಯ” ಎಂದು ರಾಹುಲ್ ಗಾಂಧಿ ಹೇಳಿದರು.
ಇದೇ ವೇಳೆ, ಲೋಕಸಭಾ ಚುನಾವಣೆಯಿಂದ ವಿಧಾನಸಭಾ ಚುನಾವಣೆಯವರೆಗೆ ಮಹಾರಾಷ್ಟ್ರದಲ್ಲಿ ಮತದಾರರ ಸಂಖ್ಯೆಯಲ್ಲಿ ಭಾರೀ ಹೆಚ್ಚಳದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ ಚುನಾವಣಾ ಆಯೋಗವನ್ನು ರಾಹುಲ್ ಗಾಂಧಿ ತೀವ್ರ ತರಾಟೆಗೆ ತೆಗೆದುಕೊಂಡರು.