►ಸಿಎಂ ಪಿಣರಾಯಿ ಪ್ರಾಬಲ್ಯ ಕೊನೆಗಾಣಿಸಲು ಪಣ ಎಂದ ಶಾಸಕ
ತಿರುವನಂತಪುರ: ಪಕ್ಷೇತರ ಶಾಸಕ ಪಿ.ವಿ. ಅನ್ವರ್ ಅವರು ವಿಧಾನಸಭೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ (ಟಿಎಂಸಿ) ಸೇರ್ಪಡೆಯಾಗಿದ್ದಾರೆ.
ಅನ್ವರ್ ಅವರು, ಮಲಪ್ಪುರಂ ಜಿಲ್ಲೆಯ ನೀಲಂಬೂರ್ ಕ್ಷೇತ್ರದಲ್ಲಿ ಎಡ ಪಕ್ಷಗಳ ಬೆಂಬಲದೊಂದಿಗೆ ಎರಡು ಬಾರಿ ವಿಧಾನಸಭೆ ಪ್ರವೇಶಿಸಿದ್ದರು. ಈ ಕ್ಷೇತ್ರವು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಪ್ರತಿನಿಧಿಸುವ ವಯನಾಡ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.
ಎಡ ಪಕ್ಷಗಳ ನಾಯಕರೊಂದಿಗೆ ಸಂಬಂಧ ಹಳಸಿದ ಬೆನ್ನಲ್ಲೇ, ಅನ್ವರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ, ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ.
ವಿಧಾನಸಭಾ ಸ್ಪೀಕರ್ ಎ.ಎನ್.ಶಂಸೀರ್ ಅವರಿಗೆ ಸೋಮವಾರ ರಾಜೀನಾಮೆ ಸಲ್ಲಿಸಿರುವ ಅವರು, ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರಾಬಲ್ಯವನ್ನು ಕೊನೆಗಾಣಿಸುವ ಸಲುವಾಗಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟದ ಅಭ್ಯರ್ಥಿಯನ್ನು ಬೆಂಬಲಿಸುತ್ತೇನೆ. ಪಿಣರಾಯಿ ಸರ್ಕಾರದ ಪತನಕ್ಕೆ ಉಪ ಚುನಾವಣೆಯೊಂದಿಗೆ ಕ್ಷಣಗಣನೆ ಆರಂಭವಾಗಲಿದೆ ಎಂದು ಹೇಳಿದ್ದಾರೆ.