ಹುಬ್ಬಳ್ಳಿ: ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಗಳ ಬಸ್ಗಳಲ್ಲಿ ಪುರುಷರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಪ್ರಸ್ತಾವನೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಸಂವಾದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ವಿಷಯವನ್ನು ಪ್ರಸ್ತಾಪಿಸಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಅವರನ್ನು ಭೇಟಿ ಮಾಡಿದಾಗ ಈ ಕುರಿತು ವಿಚಾರಿಸುತ್ತೇನೆ. ಆದರೆ ಪುರುಷರಿಗೆ ಉಚಿತ ಬಸ್ ಸೇವೆ ನೀಡುವ ಪ್ರಸ್ತಾವನೆ ನಮ್ಮ ಮುಂದಿಲ್ಲ ಎಂದರು.
ಕಾಂಗ್ರೆಸ್ ಶಾಸಕರನ್ನು ಖರೀದಿಸುವ ಹಿಂದೆ ಕಾಂಗ್ರೆಸ್ ಮುಖಂಡರೇ ಇದ್ದಾರೆ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಬಿಜೆಪಿ ಅಂದರೆ ಬುರುಡೆ ಜನತಾ ಪಕ್ಷ. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ರಚನೆ ಮಾಡಿದ್ದು ಹೇಗೆ? ದೇಶದಲ್ಲಿ ಕಾಂಗ್ರೆಸ್ನ 214 ಸೇರಿ ಬೇರೆ ಬೇರೆ ಪಕ್ಷಗಳ 450 ಶಾಸಕರನ್ನು ಆಪರೇಷನ್ ಕಮಲ ಮೂಲಕ ಖರೀದಿಸಿದ್ದಾರೆ ಎಂದು ಆರೋಪಿಸಿದರು.
ಕರ್ನಾಟಕದಲ್ಲಿ ಈ ಬಾರಿಯೂ ಬಿಜೆಪಿ ಪ್ರಯತ್ನ ಮಾಡಿದೆ. ಆದರೆ ಯಶಸ್ವಿ ಆಗಲಿಲ್ಲ. ಕಾಂಗ್ರೆಸ್ನ ಯಾವ ಶಾಸಕರು ಆಮಿಷಕ್ಕೊಳಗಾಗಿ ಹೋಗಲ್ಲ ಎಂದರು. ಕೋವಿಡ್ ಹಗರಣ ಎಸ್ಐಟಿಗೆ ಕೊಡುವ ವಿಚಾರವನ್ನು ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ, ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದರು.