ಮಳೆಗಾಲ ಕಳೆದರೂ ಕುಗ್ಗಲ್ಲ ‘ಬಿಸಿಲೆ’ಯ ಸೌಂದರ್ಯ: 3 ಜಿಲ್ಲೆಗಳ ಸಂಬಂಧ ಬೆಸೆಯುವ ಘಾಟ್‌ಗೆ ಒಮ್ಮೆ ಭೇಟಿ ನೀಡಿ!

Prasthutha|

✍️ಸುಹೈಲ್ ಮಾರಿಪಳ್ಳ

- Advertisement -

ಮಳೆಗಾಲ‌ ಕೊನೆಗೊಳ್ಳುವ ಹೊತ್ತಿಗೆ, ಬೇಸಿಗೆ ಇನ್ನೇನು ಬರಲು ಮುಂದಡಿ ಇಡುವ ಸಮಯದಲ್ಲಿ ಪ್ರಕೃತಿಯ ರಮಣೀಯ ಪ್ರದೇಶಗಳಿಗೊಮ್ಮೆ ಭೇಟಿ ನೀಡಿದರೆ ಮನಸ್ಸಿನ ದುಗುಡು ದುಮ್ಮಾನಗಳನ್ನು ಮರೆಯಬಹುದು.

ನೀವು ಪ್ರಕೃತಿಯ ಮಡಿಲಲ್ಲಿ ದಿನಕಳೆಯಬೇಕೆಂದಿದ್ದರೆ ಬಿಸ್ಲೆ ಘಾಟ್‌ ಉತ್ತಮ ಆಯ್ಕೆಯಾಗಿದೆ. ಕರ್ನಾಟಕದಲ್ಲಿರುವ ಬಿಸ್ಲೆ ಘಾಟ್‌ ಮನಸ್ಸಿಗೆ ಮುದ ನೀಡುವ ಲಕ್ಷಾಂತರ ಚಿಟ್ಟೆಗಳ ನೆಲೆಯಾಗಿದೆ. ಇದು ಪಶ್ಚಿಮ ಘಟ್ಟಗಳ ಅತ್ಯಂತ ಸುಂದರವಾದ ತಾಣಗಳಲ್ಲಿ ಒಂದಾಗಿದೆ.

- Advertisement -

ಕರ್ನಾಟಕದ ಕೊಡಗು, ಮಲ್ನಾಡ್ (ಹಾಸನ ಜಿಲ್ಲೆ)‌ ಮತ್ತು ದಕ್ಷಿಣ ಕನ್ನಡ ಈ ಮೂರು ಪ್ರದೇಶಗಳನ್ನು ಬಿಸ್ಲೆ ಘಾಟ್ ಆವರಿಸಿದೆ. ನಿಮ್ಮ ಇಂದ್ರೀಯಗಳಿಗೆ ರಸದೌತಣ ನೀಡಬಹುದಾದ ಇದು ಬೆಟ್ಟಗಳ ಸಾಲನ್ನು ಹೊದ್ದು ನಿಂತಿದೆ. ಉತ್ತರಕ್ಕೆ ಕಾಗಿನಹರೆ ಅರಣ್ಯದ ಬೆಟ್ಟಗಳು, ದಕ್ಷಿಣದಲ್ಲಿ ಕುಮಾರಧಾರ ನದಿ ಹುಟ್ಟುವ ಕೊಡಗಿನ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯ, ಪಶ್ಚಿಮಕ್ಕೆ ಭಾಗಿಮಲೈ ಅರಣ್ಯ ಮತ್ತು ನೈಋತ್ಯಕ್ಕೆ ಕುಮಾರಪರ್ವತ ಮತ್ತು ಕುಕ್ಕೆ ಸುಬ್ರಣ್ಯ ಅರಣ್ಯ ಶ್ರೇಣಿಗಳನ್ನು ಕಾಣಬಹುದು.

ಬಿಸಿಲೆ ಘಾಟ್‌ ಎಲ್ಲಿದೆ?

ಸುಂದರ ವಾತಾವರಣ, ಹಕ್ಕಿಗಳ‌ ಚಿಲಿಪಿಲಿ ಸದ್ದು, ಹರಿಯುವ ನೀರಿನ ನಿನಾದ, ಮುಗಿಲು ಚುಂಬಿಸುವ ಗಿರಿ ಶಿಖರಗಳು..ಈ ಅದ್ಭುತ ಚಿತ್ರಣ ಕಂಡು ಬರೋದು ಬಿಸಿಲೆಘಾಟ್ ನಲ್ಲಿ..ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದಿಂದ ಕೇವಲ 26 ಕಿಲೋಮೀಟರ್ ದೂರದಲ್ಲಿರುವ ಹಾಸನ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೂಡು ಸಂಗಮವಾದ ಈ ಪ್ರದೇಶವೇ ಬಿಸಿಲೆ ಫಾಟ್. ಮಂಗಳೂರಿನಿಂದ 123 ಕಿಲೋ ಮೀಟರ್ ಇದೆ. ಬೆಂಗಳೂರಿನಿಂದ 267 ಕಿಲೋ ಮೀಟರ್ ಇದೆ. ಮಳೆಗಾಲ ಬಂತೆಂದರೆ ಸಾಕು ಈ ಪ್ರದೇಶ ತನ್ನ ಪ್ರಕೃತಿದತ್ತವಾದ ನೈಜ ಸೌಂದರ್ಯಕ್ಕೆ ತೆರೆದುಕೊಳ್ಳುತ್ತದೆ.‌

ಬಿಸಿಲೆಘಾಟ್‌ನಿಂದ ನಿಂತು ನೋಡಿದರೆ ಎದುರಿಗೆ ಕಾಣುವ ಕೊಡಗಿನ ನಿಸರ್ಗದ ಚೆಲುವು ಮನ ತಣಿಸಿದರೆ, ಎಡಗಡೆಗೆ ಹಾಸನ, ಬಲಗಡೆಗೆ ದಕ್ಷಿಣ ಕನ್ನಡದ ನೋಟವೂ ಲಭ್ಯವಾಗುತ್ತದೆ. ಇನ್ನು ಕೊಡಗಿನ ಸೋಮವಾರಪೇಟೆ, ದಕ್ಷಿಣ ಕನ್ನಡದ ಕುಕ್ಕೆಸುಬ್ರಹ್ಮಣ್ಯ, ಹಾಸನದ ಸಕಲೇಶಪುರಕ್ಕೆ ಈ ತಾಣ ಸಮೀಪವಿರುವುದರಿಂದ ಈ ಸ್ಥಳಗಳಿಗೆ ಭೇಟಿ ನೀಡಿದ ಪ್ರವಾಸಿಗರು ಬಿಸಿಲೆಘಾಟ್‌ ಗೂ ಪ್ರಯಾಣ ಬೆಳೆಸುವುದು ಸಾಮಾನ್ಯವಾಗಿದೆ.

ಬಿಸಿಲೆಘಾಟ್ ಪಶ್ಚಿಮ ಘಟ್ಟದ ಅರಣ್ಯದ ಸುಂದರ ನೋಟವನ್ನು ಪ್ರವಾಸಿಗರಿಗೆ ಉಣಬಡಿಸುತ್ತದೆ. ಮಲೆನಾಡಿನಲ್ಲಿ ನೆಲೆನಿಂತಿರುವುದರಿಂದ ರಸ್ತೆಯ ಇಬ್ಭಾಗದಲ್ಲಿಯೂ ಬೆಳೆದು ನಿಂತ ಹೆಮ್ಮರಗಳು, ಬೆಟ್ಟಗುಡ್ಡಗಳ ನಡುವಿನ ಅಂಕುಡೊಂಕಾದ ರಸ್ತೆಯಲ್ಲಿ ಸಾಗಬೇಕು. ಇದೊಂದು ರೀತಿಯ ರೋಮಾಂಚನಕಾರಿ ಅನುಭವ ಎಂದರೆ ತಪ್ಪಾಗಲಾರದು.

ಅರಣ್ಯ ಇಲಾಖೆಯ ಅಧೀನದಲ್ಲಿ ಈ ತಾಣವಿದ್ದು, ಪ್ರವಾಸಿಗರಿಗೆ ಪ್ರಕೃತಿಯ ಚೆಲುವನ್ನು ವೀಕ್ಷಿಸಲೆಂದೇ ಎರಡಂತಸ್ತಿನ ವೀಕ್ಷಣಾ ಗೋಪುರವನ್ನು ನಿರ್ಮಿಸಲಾಗಿದೆ. ಇಲ್ಲಿಂದ ನಿಂತು ನೋಡಿದರೆ ನಿಸರ್ಗದ ಚೆಲುವು ನಮ್ಮೆಲ್ಲಾ ಜಂಜಾಟವನ್ನು ಮರೆಸಿ ಮನದಲ್ಲಿ ನೆಮ್ಮದಿ ನೆಲೆಸುವಂತೆ ಮಾಡಿಬಿಡುತ್ತದೆ.

ಇಲ್ಲಿಂದ ನಿಂತು ನೋಡಿದ್ದೇ ಆದರೆ ಹಾಸನ ಜಿಲ್ಲೆಗೆ ಸೇರಿದ 1112 ಮೀ. ಎತ್ತರದ ಪಟ್ಟಬೆಟ್ಟ, 900 ಮೀ. ಎತ್ತರದ ಇನ್ನಿಕಲ್ಲು ಬೆಟ್ಟ, ದಕ್ಷಿಣಕನ್ನಡ ಜಿಲ್ಲೆಗೆ ಸೇರಿದ 1319 ಮೀ. ಎತ್ತರದ ಕುಮಾರ ಪರ್ವತ, ಕೊಡಗಿಗೆ ಸೇರಿದ 1119 ಮೀ. ಎತ್ತರದ ದೊಡ್ಡಬೆಟ್ಟ ಹಾಗೂ 1712 ಮೀ. ಎತ್ತರದ ಪುಷ್ಪಗಿರಿ ಪರ್ವತಗಳು ಗಮನಸೆಳೆಯುತ್ತವೆ.

ಅರಣ್ಯದ ನಡುವೆ ನಿರ್ಮಾಣವಾಗಿರುವ ತಾಣವಾದುದರಿಂದ ಇಲ್ಲಿ ನಿಗದಿತ ಸಮಯಗಳಲ್ಲಿ ಮಾತ್ರ ಪ್ರವೇಶಾವಕಾಶವಿದ್ದು, ರಾತ್ರಿ ವೇಳೆಯಲ್ಲಿ ಈ ಮಾರ್ಗಗಳಲ್ಲಿ ಸಂಚರಿಸುವುದು ಅಪಾಯ. ಏಕೆಂದರೆ ಅರಣ್ಯವಲಯವಾದುದರಿಂದ ಕಾಡಾನೆ ಸೇರಿದಂತೆ ವನ್ಯ ಮೃಗಗಳು ಸಂಚರಿಸುತ್ತಿರುತ್ತವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆಯನ್ನೂ ನೀಡುತ್ತಾರೆ.



Join Whatsapp