ಸಂಭಾಜಿನಗರ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ನಿಮ್ಮ ಪೂರ್ವಿಕರು ಬ್ರಿಟಿಷರ ವಿರುದ್ಧ ಹೋರಾಡುವ ಬದಲು ‘ಪ್ರೇಮಪತ್ರ’ಗಳನ್ನು ಬರೆಯುತ್ತಿದ್ದರು ಎಂದು ಆರೋಪಿಸಿದ್ದಾರೆ.
‘ಮಹಾ’ ವಿಧಾನಸಭೆ ಚುನಾವಣೆ ಪ್ರಚಾರ ಕಾವೇರುತ್ತಿದೆ. ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು, ‘ಏಕ್ ಹೈ ತೊ ಸೇಫ್ ಹೈ’ (ಒಗ್ಗಟ್ಟಿನಿಂದ ಇದ್ದರೆ, ಸುರಕ್ಷಿತವಾಗಿರುತ್ತೇವೆ) ಎಂದು ಜನರಿಗೆ ಕರೆ ನೀಡಿದ್ದರು. ಲೋಕಸಭೆ ಚುನಾವಣೆ ವೇಳೆ ಧುಲೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಎದುರಾದ ಅಲ್ಪ ಅಂತರದ ಸೋಲನ್ನು ಉಲ್ಲೇಖಿಸಿ ಪ್ರಚಾರದ ಮಾತನಾಡಿದ್ದ ಫಡಣವೀಸ್, ಮಹಾರಾಷ್ಟ್ರದಲ್ಲಿ ಇದೀಗ ‘ಮತ ಜಿಹಾದ್’ ನಡೆಯುತ್ತಿದೆ. ಧರ್ಮಯುದ್ಧ ಕೈಗೊಳ್ಳುವ ಮೂಲಕ ಅದನ್ನು ಹತ್ತಿಕ್ಕಬೇಕು ಎಂದಿದ್ದರು.
ಔರಂಗಾಬಾದ್ ಪೂರ್ವ ಹಾಗೂ ಔರಂಗಾಬಾದ್ ಕೇಂದ್ರ ಕ್ಷೇತ್ರಗಳಲ್ಲಿ ಕಣಕ್ಕಿಳಿದಿರುವ ಎಐಎಂಐಎ ಅಭ್ಯರ್ಥಿಗಳ ಪರ ಛತ್ರಪತಿ ಸಂಭಾಜಿನಗರದ ಜಿನ್ಸಿ ಪ್ರದೇಶದಲ್ಲಿ ಪ್ರಚಾರ ನಡೆಸಿದ ಒವೈಸಿ, ಮೋದಿ ಹಾಗೂ ಫಡಣವೀಸ್ ವಿರುದ್ಧ ಕಿಡಿಕಾರಿದ್ದಾರೆ.
‘ನಮ್ಮ ಪೂರ್ವಿಕರು ಬ್ರಿಟೀಷರ ವಿರುದ್ಧ ಜಿಹಾದ್ ನಡೆಸಿದ್ದರು. ಇದೀಗ, ಫಡಣವೀಸ್ ನಮಗೆ ಜಿಹಾದ್ ಬಗ್ಗೆ ಪಾಠ ಹೇಳುತ್ತಿದ್ದಾರೆ. ನರೇಂದ್ರ ಮೋದಿ, ಅಮಿತ್ ಶಾ ಮತ್ತು ದೇವೇಂದ್ರ ಫಡಣವೀಸ್ ಒಂದಾಗಿ ಬಂದರೂ ಚರ್ಚೆಯಲ್ಲಿ ನನ್ನನ್ನು ಸೋಲಿಸಲಾಗದು’ ಎಂದಿದ್ದಾರೆ.
‘ಮತ ಜಿಹಾದ್ – ಧರ್ಮಯುದ್ಧ’ ಹೇಳಿಕೆಗಳಿಂದ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ.
ಹೈದರಾಬಾದ್ ನ ಸಂಸದರೂ ಆಗಿರುವ ಒವೈಸಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತ ಜಿಹಾದ್ ಮತ್ತು ಧರ್ಮಯುದ್ಧ ಎಲ್ಲಿಂದ ಬಂದವು? ನೀವು ಶಾಸಕರನ್ನು ಖರೀದಿಸಿದ್ದೀರಿ; ನಿಮ್ಮನ್ನು ಕಳ್ಳರು ಎನ್ನೋಣವೇ?’ ಎಂದು ಪ್ರಶ್ನಿಸಿದ್ದಾರೆ.