ಮದ್ಯ ಉದ್ಯಮಿಗಳಿಂದ 700 ಕೋ.ರೂ. ಲೂಟಿ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಸಿಎಂ ಸಿದ್ದರಾಮಯ್ಯ

Prasthutha|

ಬೆಂಗಳೂರು: ಕರ್ನಾಟಕ ಸರಕಾರವು ಮದ್ಯ ಉದ್ಯಮಿಗಳಿಂದ 700 ಕೋಟಿ ರೂ. ಲೂಟಿ ಮಾಡಿ ಆ ಹಣವನ್ನು ಮಹಾರಾಷ್ಟ್ರ ಚುನಾವಣೆಗೆ ಬಳಸುತ್ತಿದೆ ಎಂಬ ಪ್ರಧಾನಿ ಮೋದಿ ಅವರ ಆರೋಪದ ವಿರುದ್ಧ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಸಹಿತ ರಾಜ್ಯ ಕಾಂಗ್ರೆಸ್‌ನ ಹಲವು ನಾಯಕರು ಮುಗಿಬಿದ್ದಿದ್ದಾರೆ. ಆರೋಪ ಸಾಬೀತುಪಡಿಸಿ ಇಲ್ಲವೇ ರಾಜಕೀಯ ನಿವೃತ್ತಿ ಪಡೆಯಿರಿ ಎಂದು ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

- Advertisement -

“ಮೋದಿಯವರೇ, ನಮ್ಮ ಸರಕಾರದ ಮೇಲೆ ನೀವು ಮಾಡಿದ 700 ಕೋಟಿ ರೂ. ವಸೂಲಿ ಆರೋಪವನ್ನು ಸಾಬೀತು ಮಾಡಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಸಾಬೀತು ಪಡಿಸದಿದ್ದರೆ ನೀವು ರಾಜಕೀಯ ನಿವೃತ್ತಿ ಪಡೆಯುತ್ತೀರಾ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಹಾವೇರಿಯ ಶಿಗ್ಗಾಂವಿ ಕ್ಷೇತ್ರದಲ್ಲಿ ರವಿವಾರ ಕಾಂಗ್ರೆಸ್‌ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕ ಸರಕಾರವು ಮದ್ಯ ಉದ್ಯಮದಿಂದ ಸಂಗ್ರಹಿಸಿ ನೀಡಿದ 700 ಕೋಟಿ ರೂ. ಹಣವನ್ನು ಕಾಂಗ್ರೆಸ್‌ ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಬಳಸುತ್ತಿದೆ ಎಂಬ ಪ್ರಧಾನಿ ಮೋದಿಯವರು ಮಾಡಿದ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಘೋಷಿಸಿದರು. “ಸುಳ್ಳುಗಾರ ಮೋದಿಯವರು ನಮ್ಮ ವಿರುದ್ಧ ಹೊಸ ಸುಳ್ಳಿನ ಆರೋಪ ಮಾಡಿದ್ದಾರೆ. ಒಂದು ವೇಳೆ ಅವರು ಆರೋಪ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ನಿವೃತ್ತಿ ಘೋಷಿಸುತ್ತಾರಾ’ ಎಂದು ಪ್ರಶ್ನಿಸಿದರು.



Join Whatsapp