ಹಾವೇರಿ : ಶಿಗ್ಗಾಂವಿ ಉಪಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ, ತಮ್ಮ ಮಗ ಭರತ್ ಅವರ ಗೆಲುವಿಗಾಗಿ ವಿವಿಧ ಸಮುದಾಯಗಳ ನಿಕಟ ಸಂಪರ್ಕ ಕಾಯ್ದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಮುಸ್ಲಿಂ ಸಮುದಾಯದ ಕೆಲವು ಪ್ರಮುಖ ಮುಖಂಡರೊಂದಿಗೆ ಬೊಮ್ಮಾಯಿ ಬಂಕಾಪುರ ಪಟ್ಟಣದಲ್ಲಿ ಸಭೆ ನಡೆಸಿದರು.
ಬಂಕಾಪುರದ ಪ್ರಮುಖ ಮುಸ್ಲಿಂ ಮುಖಂಡರ ಮನೆಗೆ ಮಂಗಳವಾರ ರಾತ್ರಿ ಭೇಟಿ ನೀಡಿದ ಬೊಮ್ಮಾಯಿ, “ನಾನು ಯಾವಾಗಲೂ ನಿಮ್ಮೊಂದಿಗೆ ನಿಂತಿದ್ದೇನೆ. ನಿಮ್ಮ ವ್ಯಾಪಾರ, ಉದ್ಯಮವನ್ನು ಬೆಳೆಸುವ ಮೂಲಕ ಆರ್ಥಿಕವಾಗಿ ಬಲಿಷ್ಠರಾಗಬೇಕು,” ಎಂದು ಸಮುದಾಯದವರಿಗೆ ಸಂದೇಶ ನೀಡಿದರು.
ಶಿಗ್ಗಾಂವಿ -ಸವಣೂರ ಕ್ಷೇತ್ರದ ಭಾವೈಕ್ಯತೆಯನ್ನು ಬಿಂಬಿಸುತ್ತಾ ಅವರು, “ಈ ಭಾಗವು ಸರ್ವಧರ್ಮ ಸೌಹಾರ್ದತೆಗೆ ಹೆಸರಾಗಿದೆ. ಕನಕದಾಸರು, ಶರೀಫ್-ಶಿವಯೋಗಿಗಳಂತಹ ಮಹನೀಯರ ಪರಂಪರೆಯನ್ನು ನಾವೆಲ್ಲರೂ ಗೌರವಿಸುತ್ತೇವೆ. ನಮ್ಮ ಮಧ್ಯೆ ಸಹಾನುಭೂತಿ, ಸಹನಶೀಲತೆ ಮತ್ತು ಬಾಂಧವ್ಯವು ಅನೇಕ ಶತಮಾನಗಳಿಂದ ಇದೆ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.