ಅಧಿಕಾರದ ತೆವಲಿಗಾಗಿ ಕುಮಾರಸ್ವಾಮಿಯಿಂದ ಕ್ಷೇತ್ರ ಬದಲಾವಣೆ: ಸಚಿವ ಚಲುವರಾಯಸ್ವಾಮಿ

Prasthutha|

ರಾಮನಗರ: ಕೇಂದ್ರ ಸಚಿವ ಕುಮಾರಸ್ವಾಮಿಯವರು ತಮ್ಮ ಅಧಿಕಾರದ ತೆವಲಿಗಾಗಿ ಕ್ಷೇತ್ರ ಬದಲಾವಣೆ ಮಾಡುತ್ತಲೇ ಬಂದಿದ್ದಾರೆ. ಕ್ಷೇತ್ರದ ಜನರು ಅಭಿವೃದ್ಧಿಗೆ ಮತ ಹಾಕುವ ನಿರ್ಣಯ ಮಾಡಿದ್ದಾರೆ. ಇನ್ನಾದರೂ ಚನ್ನಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ಚುನಾವಣೆಯಿಂದ ದೂರ ಸರಿಯಲಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಸವಾಲು ಹಾಕಿದರು.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವ್ಯಾರು ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣ ಬಿಟ್ಟು ಹೋಗಿ ಅಂತ ಹೇಳಿಲ್ಲ. ನಿಮ್ಮ ಅನುಕೂಲಕ್ಕೆ ಕ್ಷೇತ್ರ ಬಿಡುವುದಾದರೆ, ಜನರ ಅನುಕೂಲ ನೋಡುವವರು ಯಾರು ಎಂದು ಪ್ರಶ್ನಿಸಿದರು.

ಕುಮಾರಸ್ವಾಮಿಗೆ ರಾಮನಗರ, ಚನ್ನಪಟ್ಟಣ ಬಗ್ಗೆ ಪ್ರೀತಿ ಇದ್ದರೆ ಅಭಿವೃದ್ಧಿ ಕಾರಣಕ್ಕಾಗಿಯಾದರೂ ಕ್ಷೇತ್ರ ಬಿಡಬೇಕು. ನಿಮ್ಮ ಅನುಕೂಲಕ್ಕೆ ಲೋಕಸಭಾ ಸದಸ್ಯರಾದಿರಿ, ನಿಮ್ಮ ತೆವಲಿಗೆ ನೀವು ಬದಲಾದರೆ ನಾವು ನಿಮ್ಮ ಹಿಂದೆ ಬರಬೇಕೆ ಎಂದು ಚನ್ನಪಟ್ಟಣ ಜನರೇ ಕೇಳುತಿದ್ದಾರೆ. ರಾಮನಗರದಿಂದ ಚನ್ನಪಟ್ಟಣಕ್ಕೆ ಬಂದರು. ಚನ್ನಪಟ್ಟಣದಿಂದ ಮಂಡ್ಯಕ್ಕೆ ಬಂದಿದ್ದಾಯಿತು. ಮುಂದಿನ ವಿಧಾನಸಭಾ ಚುನಾವಣೆ ವೇಳೆಗೆ ಮತ್ತೊಮ್ಮೆ ಕ್ಷೇತ್ರ ಬದಲಾಯಿಸುತ್ತಾರೆ ಎಂದು ಕಿಡಿಕಾರಿದರು.

- Advertisement -


ದೇವೇಗೌಡರು ಹಾಸನದಲ್ಲಿ ಹುಟ್ಟಿದ್ದರೂ ರಾಮನಗರ ಜಿಲ್ಲೆ ಅವರ ಕುಟುಂಬಕ್ಕೆ ಕಾಮಧೇನಾಗಿದೆ. ರಾಮನಗರ ಜಿಲ್ಲೆ ಕುಮಾರಸ್ವಾಮಿಗೆ ಇಲ್ಲಿಯವರೆಗೂ ಗೆಲುವು ಕೊಟ್ಟಿದೆ. ಆದರೆ, ಕುಮಾರಸ್ವಾಮಿ ರಾಮನಗರ ಜಿಲ್ಲೆಗೆ ಯಾವ ಕೊಡುಗೆಯನ್ನೂ ಕೊಟ್ಟಿಲ್ಲ. ಯೋಗೇಶ್ವರ್ ಸ್ಥಳೀಯರು, ಕೈಗೆ ಸಿಗುವ ವ್ಯಕ್ತಿ, ತಾಲೂಕಿಗೆ ನೀರಾವರಿ ತಂದವರು, ಉಪಮುಖ್ಯಮಂತ್ರಿ ನೀರಾವರಿ ಸಚಿವರಾಗಿರುವ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ರಾಮನಗರ ಜಿಲ್ಲೆಯ ಅಭಿವೃದ್ಧಿಗೆ ಒತ್ತು ಕೊಟ್ಟವರು.
ಉಪಮುಖ್ಯಮಂತ್ರಿಗಳು ಈಗಾಗಲೇ ಚನ್ನಪಟ್ಟಣ ಅಭಿವೃದ್ಧಿಗೆ 500 ಕೋಟಿ ರು. ಘೋಷಣೆ ಮಾಡಿದ್ದಾರೆ. ಮೂರೂವರೆ ವರ್ಷ ಚನ್ನಪಟ್ಟಣದ ಅಭಿವೃದ್ಧಿಗಾಗಿ ಜನ ಮತ ಹಾಕುವಂತೆ ಚಲುವರಾಯಸ್ವಾಮಿ ಮನವಿ ಮಾಡಿದರು. ಕುಮಾರಸ್ವಾಮಿ ಅವರನ್ನು ನಾವ್ಯಾರು ಟಾರ್ಗೆಟ್ ಮಾಡುತ್ತಿಲ್ಲ. ನಾವು ಇಲ್ಲಿವರೆಗೂ ಅವರನ್ನು ಬೈದಿಲ್ಲ. ನಾವು ಅವರನ್ನು ವಿರೋಧಿಗಳು ಎಂದು ಎಲ್ಲಿಯೂ ಹೇಳಿಲ್ಲ. ಅವರೇ ನಮ್ಮನ್ನು ಬೈದುಕೊಂಡು ತಿರುಗಾಡುತ್ತಿದ್ದಾರೆ ಎಂದು ಹೇಳಿದ್ದಾರೆ.



Join Whatsapp