ರಾಂಚಿ: ಯುವಜನರಿಗಾಗಿ 10 ಲಕ್ಷ ನೌಕರಿ ಸೃಷ್ಟಿಸುವ ಹಾಗೂ ಬಡಜನರಿಗೆ ₹ 15 ಲಕ್ಷದವರೆಗೂ ಆರೋಗ್ಯ ವಿಮಾ ಭದ್ರತೆ ಒದಗಿಸುವುದು ಸೇರಿದಂತೆ ಗ್ಯಾರಂಟಿಗಳಿರುವ ಪ್ರಣಾಳಿಕೆಯನ್ನು ‘ಇಂಡಿಯಾ’ ಮೈತ್ರಿಕೂಟ ಬಿಡುಗಡೆ ಮಾಡಿದೆ.
ಮೀಸಲು ಪ್ರಮಾಣವನ್ನು ಪರಿಶಿಷ್ಟ ಪಂಗಡದವರಿಗೆ ಶೇ 28ಕ್ಕೆ, ಪರಿಶಿಷ್ಟ ಜಾತಿಯವರಿಗೆ ಶೇ 12ಕ್ಕೆ ಹಾಗೂ ಇತರೆ ಹಿಂದುಳಿದ ವರ್ಗದವರಿಗೆ ಶೇ 27ಕ್ಕೆ ಏರಿಸುವ ಭರವಸೆಯನ್ನು ‘ಇಂಡಿಯಾ’ ನೀಡಿದೆ. ಪ್ರಸ್ತುತ ಮೀಸಲಾತಿ ಪ್ರಮಾಣ ಕ್ರಮವಾಗಿ ಶೇ 26, ಶೇ 10 ಮತ್ತು ಶೇ 14ರಷ್ಟಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಆರ್ಜೆಡಿ ನಾಯಕ ಜೆ.ಪಿ.ಯಾದವ್ ಅವರು ಜಂಟಿಯಾಗಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
‘ನಾವು ಎಂದಾದರೂ ಗ್ಯಾರಂಟಿ ಬಗ್ಗೆ ಮಾತನಾಡಿದರೆ, ಪ್ರಧಾನಿ ಹಿಂದೆಯೇ ಅದನ್ನು ಟೀಕಿಸುತ್ತಾರೆ. ಚುನಾವಣೆ ಪ್ರಚಾರದ ವೇಳೆ ನನ್ನ ಹೆಸರು ಉಲ್ಲೇಖಿಸಿ ಕಾಂಗ್ರೆಸ್ನ ಗ್ಯಾರಂಟಿ ವಿಶ್ವಾಸಾರ್ಹವಲ್ಲ ಎಂದಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಲಿದೆ‘ ಎಂದು ಖರ್ಗೆ ಹೇಳಿದರು.
ಉಳಿದಂತೆ, ಬಡಜನರಿಗೆ ಈಗ ನೀಡುತ್ತಿರುವ ಮಾಸಿಕ ಪಡಿತರವನ್ನು ಈಗಿನ 5 ಕೆ.ಜಿಯಿಂದ 7 ಕೆ.ಜಿಗೆ ಏರಿಸುವುದು, ಅಡುಗೆ ಅನಿಲ ಸಿಲಿಂಡರ್ ಅನ್ನು ₹ 450ಕ್ಕೆ ಒದಗಿಸುವುದಾಗಿಯೂ ಭರವಸೆ ನೀಡಿದೆ.
ಚುನಾವಣೆ ಬಳಿಕ ಅಸ್ತಿತ್ವಕ್ಕೆ ಬರುವ ಸರ್ಕಾರ ಈ ಗ್ಯಾರಂಟಿಗಳ ಜಾರಿಗೆ ಒತ್ತು ನೀಡಲಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದರು.