ನವದೆಹಲಿ: ಎರಡು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದು 17 ತಿಂಗಳ ಮೇಲಾಯಿತು. ಇನ್ನೂ ಕೂಡ ಮೂರೂವರೆ ಕೋಟಿ ಸಂಖ್ಯೆಯಷ್ಟು ನೋಟುಗಳು ಮರಳಿಲ್ಲ. ಇವುಗಳ ಒಟ್ಟು ಮೌಲ್ಯ 6,977.6 ಕೋಟಿ ರೂ ಇದೆ.
ಆದರೆ, 2023ರ ಮೇ 19ರಂದು ಆರ್ ಬಿಐ 2,000 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಾಗ 3.56 ಲಕ್ಷ ಕೋಟಿ ರೂ ಮೌಲ್ಯದ 2,000 ರೂ ನೋಟುಗಳು ಚಲಾವಣೆಯಲ್ಲಿ ಇದ್ದವು. ಈ ಪೈಕಿ 3.51 ಲಕ್ಷ ಕೋಟಿ ರೂ ಮೌಲ್ಯದ ನೋಟುಗಳು ಆರ್ ಬಿಐಗೆ ಮರಳಿವೆ. ಮರಳದೇ ಇರುವ ನೋಟುಗಳ ಪ್ರಮಾಣ ಶೇ 1.96 ಮಾತ್ರ ಎಂದು ಆರ್ ಬಿಐ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದು ಬಂದಿದೆ.
2016ರಲ್ಲಿ ಕೇಂದ್ರ ಸರ್ಕಾರ ನೋಟ್ ಬ್ಯಾನ್ ಕ್ರಮ ತೆಗೆದುಕೊಂಡು ಆಗ ಚಲಾವಣೆಯಲ್ಲಿದ್ದ 500 ರೂ ಮತ್ತು 1,000 ರೂ ಮುಖಬೆಲೆಯ ನೋಟುಗಳನ್ನು ಅಸಿಂಧುಗೊಳಿಸಿತು. ಅದಕ್ಕೆ ಬದಲಾಗಿ ಹೊಸ 500 ರೂ ನೋಟುಗಳನ್ನು ಮುದ್ರಿಸಿತು. 2,000 ರೂ ಮುಖಬೆಲೆಯ ನೋಟುಗಳ ಮುದ್ರಣವನ್ನೂ ಆರಂಭಿಸಿತು.
ಎರಡು ಸಾವಿರ ರೂ ಮುಖಬೆಲೆಯ ನೋಟುಗಳ ಜೀವಿತಾವಧಿ ನಾಲ್ಕರಿಂದ ಐದು ವರ್ಷಗಳೆನ್ನಲಾಗಿದೆ. 2017ರ ಮಾರ್ಚ್ ನಂತರ ಈ ನೋಟುಗಳ ಮುದ್ರಣ ಬಹಳ ಅಪರೂಪವಾಗಿದೆ. ಶೇ 89ರಷ್ಟು ಆ ನೋಟುಗಳು ಅದಕ್ಕೆ ಮುಂಚೆಯೇ ಮುದ್ರಣಗೊಂಡವಾಗಿದ್ದವು.
ಈಗ ಯಾರಾದರೂ ಈ ನೋಟನ್ನು ಹೊಂದಿದ್ದರೆ ಅದನ್ನು ಚಲಾಯಿಸಲು ಆಗುವುದಿಲ್ಲ. ಅದನ್ನು ಆರ್ ಬಿಐಗೆ ಮರಳಿಸಿ, ಅದಕ್ಕೆ ಸಮನಾದ ಮೌಲ್ಯದ ಬೇರೆ ನೋಟುಗಳನ್ನು ಪಡೆಯುವ ಅವಕಾಶ ಇದೆ. ಆರ್ ಬಿಐನ ವಿವಿಧ ಪ್ರಾದೇಶಿಕ ಕಚೇರಿಗಳಲ್ಲಿ ಈ ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಅಥವಾ ತಮ್ಮ ಖಾತೆಗೆ ಆ ಮೌಲ್ಯದ ಹಣವನ್ನು ಡೆಪಾಸಿಟ್ ಮಾಡಿಸಿಕೊಳ್ಳಬಹುದು. ಪೋಸ್ಟ್ ಮುಖಾಂತರವೂ ಈ ಕೆಲಸ ಮಾಡಲು ಸಾಧ್ಯವಿದೆ.