ಹುಬ್ಬಳ್ಳಿ: ಅನುದಾನ ಹಂಚಿಕೆ ವಿಚಾರದಲ್ಲಿ 15ನೇ ಹಣಕಾಸು ಆಯೋಗದಿಂದ ಕರ್ನಾಟಕಕ್ಕೆ ಅನ್ಯಾಯ ಆಗಿದೆ. ಈ ಕುರಿತು ಜೋಶಿ, ಬೊಮ್ಮಾಯಿ ಮಾತನಾಡಿದ್ದಾರಾ? ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ 4.5 ಲಕ್ಷ ಕೋಟಿ ರೂ. ತೆರಿಗೆ ರಾಜ್ಯದಿಂದ ಕೊಡುತ್ತಿದ್ದೇವೆ. ಆದರೆ ರಾಜ್ಯಕ್ಕೆ ಸಿಗುತ್ತಿರುವುದು ಕೇವಲ 55-60 ಸಾವಿರ ಕೋಟಿ ರೂ. ಇದು ನ್ಯಾಯಾನಾ? ಇದನ್ನು ಕೇಳಿದರೆ ರಾಜಕೀಯ ಎನ್ನುತ್ತಾರೆ. ಬಿಜೆಪಿಯವರು ಯಾವತ್ತೂ ಅನುದಾನ ಕೊರತೆ ಬಗ್ಗೆ ಮಾತನಾಡಿಲ್ಲ, ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಹ್ಲಾದ್ ಜೋಶಿ, ಬೊಮ್ಮಾಯಿ ಮಾತನಾಡಿದ್ದಾರಾ? ಎಂದು ಪ್ರಶ್ನಿಸಿದರು.
ಶೆಟ್ಟರ್, ಬೊಮ್ಮಾಯಿ, ಜೋಶಿಯವರು ಯಾವತ್ರಾದರೂ ಕೇಂದ್ರದ ಹಣದ ಬಗ್ಗೆ ಮಾತಾಡಿದ್ದಾರಾ? ಇದು ಅನ್ಯಾಯ ಅಲ್ಲಾವಾ? ಕೋರ್ಟ್ ಗೆ ಹೋದರೆ ನಮಗೆ ನ್ಯಾಯ ಸಿಗುತ್ತದೆ ಎಂದು ಅಂದುಕೊಂಡಿಲ್ಲ. ಹಣಕಾಸು ಆಯೋಗ ಶಿಫಾರಸ್ಸು ಮಾಡುವ ಆಧಾರದ ಮೇಲೆ 5 ವರ್ಷಕ್ಕೊಮ್ಮೆ ಹಣ ಕೊಡಬೇಕು 4.5 ಲಕ್ಷ ಕೋಟಿ ರೂ. ಕೊಟ್ಟು, 60 ಸಾವಿರ ಕೋಟಿ ತೆಗೆದುಕೊಳ್ಳುವುದು ಅನ್ಯಾಯ ಅಲ್ಲವಾ? ಹಣಕಾಸು ಆಯೋಗದ ಶಿಫಾರಸ್ಸು ಆಧಾರದ ಮೇಲೆ ಅನುದಾನ ಬರಬೇಕು. 11,495 ಸಾವಿರ ಕೋಟಿ ರೂ. ಅನ್ಯಾಯ ಆಗಿದೆ. 5,495 ಕೋಟಿ ರೂ. ವಿಶೇಷ ಅನುದಾನ ಕೊಡಬೇಕು. ಇದನ್ನು ಮಿಸ್ಟರ್ ಜೋಶಿ ಅವರು ಕೇಳಬೇಕು ಅಲ್ಲವಾ? ಅವರು ಅನುದಾನ ಕೊಟ್ಟಿದ್ದರೆ ನಾನು ರಾಜಕೀಯ ಬಿಡುತ್ತೇನೆ, ಆದರೆ ಜೋಶಿಯವರು ರಾಜಕೀಯ ಬಿಡ್ತಾರಾ? ಎಂದು ಅವರೇ ಉತ್ತರಿಸಲಿ ಎಂದರು.
ಇದೇ ವೇಳೆ ಪ್ರತಾಪ್ ಸಿಂಹ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರತಾಪ್ ಸಿಂಹ ಒಬ್ಬ ಮಹಾನ್ ಕೋಮುವಾದಿ, ಕೋಮುವಾದಿಗಳಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಪ್ರತಾಪ್ ಸಿಂಹನಿಗೆ ಸಂವಿಧಾನ, ಪ್ರಜಾಪ್ರಭುತ್ವ ಮೇಲೆ ಗೌರವ ಇಲ್ಲ. ಕೋಮುವಾದ ಮಾಡೋದೇ ಅವರ ಕಸುಬು, ಜಾತಿ, ಕೋಮುವಾದ ಮಾಡಿ ರಾಜಕೀಯದಲ್ಲಿ ಬದುಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.