ಕೋಲಾರ : ರಾಜ್ಯದ ಮಂತ್ರಿಯಾಗಿ ನಾನು ಹೇಳುತ್ತಿದ್ದೇನೆ ನಮ್ಮ ಸರಕಾರದ 5 ಗ್ಯಾರಂಟಿ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವವರೆಗೂ ಮುಂದುವರಿಯುತ್ತದೆ. 2028 ರಲ್ಲಿಯೂ ಪುನಃ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗಲೂ ಮುಂದುವರಿಸುತ್ತೇವೆ ಎಂದು ಸಚಿವ ಬೈರತಿ ಸುರೇಶ್ ಭರವಸೆ ನೀಡಿದರು.
ಮಹಿಳೆಯೊಬ್ಬರು ಇ ಮೇಲ್ ಮಾಡಿದ್ದ ವಿಚಾರವಾಗಿ ಡಿ.ಕೆ.ಶಿವಕುಮಾರ್ ಶಕ್ತಿ ಯೋಜನೆ ಬಗ್ಗೆ ಹೇಳಿದ್ದಾರೆ ಹೊರತು ಯಾವುದೇ ಗೊಂದಲ ಸೃಷ್ಟಿಸುವ ಪ್ರಮೇಯವಿಲ್ಲ. ಮಲ್ಲಿಕಾರ್ಜುನ ಖರ್ಗೆಯವರಿಗೂ ಸ್ವಲ್ಪ ಗೊಂದಲವಿದ್ದ ಹಿನ್ನೆಲೆಯಲ್ಲಿ ಖಂಡಿಸಿದ್ದರು. ಇದೀಗ ಸಿಎಂ, ಡಿಸಿಎಂ ಸ್ಪಷ್ಟನೆ ನೀಡಿದ್ದಾರೆ. ಎಲ್ಲವೂ ಬಗಹರಿದಿದೆ ಎಂದರು.
ಚನ್ನಪಟ್ಟಣ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಿಖಿಲ್ ಕಣ್ಣೀರು ಹಾಕಿದ್ದಾರೆ ಎಂದರೆ ಅದು ಒಂದು ಕಲೆ. ಕಣ್ಣೀರು ಹಾಕುವುದು ಸ್ವಲ್ಪ ಜನರಿಗೆ ಮಾತ್ರವೇ ಬರುತ್ತದೆ. ನಮಗೆ ಅಂತಹ ಕಲೆ ಗೊತ್ತಿಲ್ಲ. ಅವರು ಭಾವನಾತ್ಮಕವಾಗಿ ಮತ ಕೇಳಿರಬಹುದು. ಆದರೆ, ಯಾರು ಕೆಲಸ ಮಾಡಿದ್ದಾರೆ, ಯಾರನ್ನು ಗೆಲ್ಲಿಸಬೇಕು ಎನ್ನುವುದು ಜನರಿಗೆ ಗೊತ್ತಿದೆ. ಕಾಂಗ್ರೆಸ್ ಸರಕಾರ ಇರುವಾಗ ಕಾಂಗ್ರೆಸ್ ಶಾಸಕರೇ ಆಯ್ಕೆಯಾದರೆ ಅಭಿವೃದ್ಧಿಗೆ ಇನ್ನೂ ಸಹ ಅನುಕೂಲವಾಗಲಿದೆ ಎಂದ ಅವರು, ಉಪ ಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪರ ಅಲೆಯಿದೆ ಎಂದರು.