ತುಳು ಭಾಷೆಯ ಮತ್ತೊಂದು ಮೈಲಿಗಲ್ಲು: ತುಳು ವಿಕ್ಷನರಿ ಮತ್ತು ತುಳು ವಿಕಿಸೋರ್ಸ್ ಲೈವ್

Prasthutha|

ತುಳು ಮಾತನಾಡುವ ಸಮುದಾಯದ ಬೆಳವಣಿಗೆಗೆ ಮತ್ತೊಂದು ಗರಿಯೆಂಬತೆ, ತುಳು ವಿಕ್ಷನರಿ ಮತ್ತು ತುಳು ವಿಕಿಸೋರ್ಸ್ ಅಧಿಕೃತವಾಗಿ ಲೈವ್ ಆಗಿವೆ.

- Advertisement -


ತುಳು ವಿಕ್ಷನರಿ, ವಿಕಿಮೀಡಿಯಾ ಫೌಂಡೇಶನ್ ನಿರ್ವಹಿಸುವ ಅಂತರಜಾಲ ನಿಘಂಟಾಗಿದೆ. ಬಳಕೆದಾರರು ತುಳು ವಿಕ್ಷನರಿಯಲ್ಲಿ ಮಾಹಿತಿ ಹುಡುಕಬಹುದು, ಸಂಪಾದಿಸಬಹುದು ಮತ್ತು ಕೊಡುಗೆ ನೀಡಬಹುದು. ಈ ಸಾಧನೆಯು ಕರಾವಳಿ ವಿಕಿಮೀಡಿಯನ್ನರು ಮತ್ತು ತುಳು ವಿಕಿಮೀಡಿಯನ್ನರ ಆರು ವರ್ಷಗಳ ಸ್ವಯಂಪ್ರೇರಿತ ಸಂಪಾದನೆಯ ಪ್ರಯತ್ನದ ಫಲವಾಗಿದೆ ಎಂದು ವರದಿ ತಿಳಿಸಿದೆ.

ಈ ಯೋಜನೆಗೆ 2018ರಲ್ಲಿ ಮುನ್ನುಡಿ ಹಾಡಿದವರು ಡಾ. ಯು.ಬಿ. ಪವನಜರು. ಅತ್ಯಂತ ಹೆಚ್ಚು ಪದಗಳನ್ನು ಸಂಪಾದಿಸಿ ಕೊಡುಗೆ ನೀಡಿರುವವರು ಕರಾವಳಿ ವಿಕಿಮೀಡಿಯನ್ ಯೂಸರ್ ಗ್ರೂಪಿನ ಸದಸ್ಯರಾದ ಡಾ. ವಿಶ್ವನಾಥ ಬದಿಕಾನ, ದಿವಂಗತ. ರವೀಂದ್ರ ಮುಡ್ಕೂರು, ಭರತೇಶ ಅಲಸಂಡೆಮಜಲು, ಡಾ. ಕಿಶೋರ್ ಕುಮಾರ್ ರೈ ಶೇಣಿ, ಮತ್ತು ಯಕ್ಷಿತ ಮೂಡುಕೋಣಾಜೆ. ತಾಂತ್ರಿಕ ಕೆಲಸಗಳನ್ನು ಆನೂಪ್ ರಾವ್ ಕಾರ್ಕಳ, ಚಿದಾನಂದ ಕಂಪ, ಭರತೇಶ ಅಲಸಂಡೆಮಜಲು ಸಹಕರಿಸಿದ್ದರು.

- Advertisement -


ಆಗಸ್ಟ್ ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ತುಳು ಸ್ನಾತಕೋತ್ತರ ಪದವಿ ಪ್ರಾರಂಭವಾದ ಸಂದರ್ಭದಲ್ಲಿ ತುಳು ವಿಕ್ಷನರಿಯ ಕೆಲಸವೂ ಪ್ರಾರಂಭವಾಯಿತು. ಇದು ಜಾಗತಿಕ ಮಟ್ಟದಲ್ಲಿ ತುಳುಭಾಷೆಯನ್ನು ಗುರುತಿಸಲು ಪ್ರಮುಖ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ತುಳು ಭಾಷಾಭಿಮಾನಿಗಳು ಮತ್ತು ವಿದ್ವಾಂಸರುಗಳ ಸಹಯೋಗದಿಂದ ಈ ತುಳು ಶಬ್ದಕೋಶವನ್ನು ವಿಸ್ತರಿಸಲು ಮತ್ತು ಪರಿಷ್ಕರಿಸಲು ಡಿಜಿಟಲ್ ಮಾಧ್ಯಮದಲ್ಲಿ ಸಾಧ್ಯವಿದೆ.

ವಿಕ್ಷನರಿ ಒಂದು ಉಚಿತ, ಬಹುಭಾಷಾ ಆನ್‌ಲೈನ್ ನಿಘಂಟಾಗಿದ್ದು, ವ್ಯಾಖ್ಯಾನಗಳು, ವ್ಯುತ್ಪತ್ತಿಗಳು, ಉಚ್ಚಾರಣೆಗಳು, ಚಿತ್ರ, ಅನುವಾದಗಳು, ಗಾದೆ, ಒಗಟು, ನುಡಿಗಟ್ಟು ಮತ್ತು ಇನ್ನಿತರ ವಿಚಾರಗಳನ್ನು ಸೇರಿಸಿಕೊಳ್ಳಬಹುದು. ಸಾಂಪ್ರದಾಯಿಕ ನಿಘಂಟುಗಳಿಗಿಂತ ಭಿನ್ನವಾಗಿ, ಇದು ಪ್ರಪಂಚದಾದ್ಯಂತದ ಸ್ವಯಂಸೇವಕರ ಸಹಯೋಗದೊಂದಿಗೆ ಸಂಪಾದಿಸಲ್ಪಡುತ್ತದೆ. ಇದು ನಿರಂತರವಾಗಿ ಮಾರ್ಪಾಡು ಮತ್ತು ವಿಕಸನದಿಂದ ನೈಜ ಸಮಯದಲ್ಲಿ ಬೆಳೆಯುವಂತಹ ನಿಘಂಟು ಅಗಿದೆ.




Join Whatsapp