ಸಚಿವ ಈಶ್ವರ್ ಖಂಡ್ರೆ ಅನಗತ್ಯ ಗೊಂದಲ ಉಂಟು ಮಾಡುತ್ತಿದ್ದಾರೆ: ಕುಮಾರಸ್ವಾಮಿ

Prasthutha|

ರಾಮನಗರ: ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಎಚ್ಎಂಟಿ ಜಾಗದಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದಾರೆ. ಈ ಬಗ್ಗೆ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

- Advertisement -

ಈ ಕುರಿತು ಚನ್ನಪಟ್ಟಣದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಚ್ ಎಂಟಿ ಸಂಸ್ಥೆಯಿಂದ ಕೆನೆರಾ ಬ್ಯಾಂಕ್ ಗೆ ಆ ಜಾಗವನ್ನ 2002ರಲ್ಲಿಯೇ ಲೀಜ್ ಗೆ ಕೊಟ್ಟಿದೆ. ಇದನ್ನ ಗೊಂದಲ ಸೃಷ್ಟಿ ಮಾಡಲು ಅರಣ್ಯ ಸಚಿವರು ಮುಂದಾಗಿದ್ದಾರೆ. ರಾಜ್ಯದಲ್ಲಿ ಅರಣ್ಯ ಒತ್ತುವರಿ ತೆರವು ಮಾಡಲು ಹೊರಟ್ಟಿದ್ದಾರೆ. ಆ ಕೆಲಸ ಮಾಡುತ್ತಿದ್ದಾರಾ..? ಅರಣ್ಯ ಇಲಾಖೆಯಿಂದ ಎಚ್ ಎಂಟಿ ಗೆ ನೋಟಿಸ್ ಕೊಟ್ಟಿದೆ. ಶ್ರೀನಿವಾಸಪುರದಲ್ಲಿ 120 ಎಕರೆ ಭೂಮಿ ಒತ್ತುವರಿಯಾಗಿದೆ. 61 ಎಕರೆಯನ್ನ ಸರ್ವೆ ಮಾಡಿ ತಕ್ಷಣ ಮುಟ್ಟುಗೋಲು ಹಾಕಿಕೊಳ್ಳಿ ಎಂದು ಆದೇಶ ಆಗಿದೆ. ಆ ಒತ್ತುವರಿ ಭೂಮಿ ವಿಷಯದಲ್ಲಿ ಅರಣ್ಯ ಸಚಿವರು ಅಧಿಕಾರಿಗಳಿಗೆ ಏನ್ ಸೂಚನೆ ಕೊಟ್ಟಿದ್ದಾರೆ ಅಂತ ಗೊತ್ತು. ಆ ವಿಚಾರದಲ್ಲಿ ಈಶ್ವರ್ ಖಂಡ್ರೆ ಏನ್ ಮಾಡ್ತಿದ್ದೀಯಪ್ಪ ಎಂದು ಪ್ರಶ್ನೆ ಮಾಡಿದರು.


ಬಡವರಿಗೆ ಒಂದು ನ್ಯಾಯ, ನಿಮ್ಮ ಕಾಂಗ್ರೆಸ್ ನವರಿಗೆ ಒಂದು ನ್ಯಾಯನಾ? ನೀವು ಯಾರಿಗೆ ರಕ್ಷಣೆ ಕೊಡುತ್ತಿದ್ದೀರಿ. ಅರಣ್ಯ ಭೂಮಿಗೆ ರಕ್ಷಣೆ ಕೊಡುತ್ತಿದ್ದೀರೋ ಅಥವಾ ಒತ್ತುವರಿ ಮಾಡಿಕೊಂಡವರಿಗೆ ರಕ್ಷಣೆ ಕೊಡುತ್ತಿದ್ದೀರೋ? ಎಲ್ಲದರ ಬಗ್ಗೆ ಮುಂದೆ ಮಾಹಿತಿ ಕೊಡುತ್ತೇನೆ. ಎಚ್ ಎಂಟಿ ಆವರಣಕ್ಕೆ ಈಶ್ವರ್ ಖಂಡ್ರೆ ಅತಿಕ್ರಮ ಪ್ರವೇಶ ಮಾಡಿದ್ದಾರೆ. ನ್ಯಾಯಾಲಯದಲ್ಲಿ ತಕರಾರು ಅರ್ಜಿ ಇದೆ. ಅದರ ತೀರ್ಪಿಗಾಗಿ ಕಾಯುತ್ತಿದ್ದೇವೆ. ನಾವು ಕಾನೂನು ಮೂಲಕ ಹೋರಾಟ ಮಾಡುತ್ತೇವೆ. ಪ್ರಚಾರಕ್ಕಾಗಿ ಈ ವಿಚಾರ ತೆಗೆದುಕೊಳ್ಳಲ್ಲ ಎಂದು ಹೇಳಿದರು.




Join Whatsapp