ಮೈಸೂರು: ಭಾರತೀಯ ರೈಲ್ವೆ ಇಲಾಖೆ ಈ ವರ್ಷ 60 ಸಾವಿರ ಹುದ್ದೆಗಳನ್ನು ನೇಮಕಾತಿ ನಡೆಸಲಿದೆ. ಈ ಎಲ್ಲಾ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಜಲಶಕ್ತಿ ಹಾಗೂ ರೈಲ್ವೆ ರಾಜ್ಯ ಸಚಿವರಾದ ವಿ ಸೋಮಣ್ಣ ಅವರು ತಿಳಿಸಿದರು.
ಇಂದು ವಾಕ್ ಮತ್ತು ಶ್ರವಣ ಸಂಸ್ಥೆಯ ವಿಜ್ಞಾನ ಭವನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಉದ್ಯೋಗಗಳಲ್ಲಿ ಆಯ್ಕೆಯಾದ 51,000 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಪತ್ರಗಳ ವಿತರಣೆ ಹಾಗೂ ಉದ್ಯೋಗ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 2014 ರಿಂದ 12 ಆವೃತ್ತಿಯಲ್ಲಿ ಉದ್ಯೋಗ ಮೇಳವನ್ನು ಮಾಡಿ ಇಲ್ಲಿಯವರೆಗೆ 14 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಲಾಗಿದೆ. ಇದರಿಂದ ಪ್ರತಿಭಾವಂತರಿಗೆ ಉದೋಗಗಳನ್ನು ನೀಡಲಾಗುತ್ತಿದೆ. ರೈಲ್ವೆ ಇಲಾಖೆಯಲ್ಲಿ 2014 ರಿಂದ ಇಲ್ಲಿಯವರೆಗೆ ಮಿಶನ್ ಮೋಡ್ ನಲ್ಲಿ 5.2 ಲಕ್ಷ ಉದ್ಯೋಗಳನ್ನು ನೀಡಲಾಗಿದೆ. ಇದರ ಜೊತೆಗೆ ಅಂಚೆ ಇಲಾಖೆಯಲ್ಲಿ ಹೆಚ್ಚಿನ ನೇಮಕಾತಿಗಳು ನಡೆಯುತ್ತಿವೆ ಎಂದರು.
ಜನ ಸಾಮಾನ್ಯರ ಪರವಾದ ಯೋಜನೆ ಜಾರಿಗೆ: ಕೇಂದ್ರ ಅವರು ಜನ್ಧನ್ ಸೇರಿದಂತೆ ಹಲವು ಸಾಮಾನ್ಯರ ಪರವಾದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮೈಸೂರಿನ ವಾಕ್ ಮತ್ತು ಶ್ರವಣ ಸಂಸ್ಥೆಗೆ 150 ಕೋಟಿ ಅನುದಾನ ನೀಡಿ ಇದರ ಸರ್ವಾಂಗೀಣ ಅಭಿವೃದ್ಧಿಗೆ ಕೂಡ ಕೊಡುಗೆ ನೀಡಿದೆ ಎಂದು ತಿಳಿಸಿದರು.