ಜಯಾ ಕಿಶೋರಿ ಅವರು ತಮ್ಮ ಆಧ್ಯಾತ್ಮಿಕ ಭಾಷಣಗಳಲ್ಲಿ ‘ಸರಳ ಜೀವನವೇ ಸುಂದರ, ನಿಜವಾದ ಸಂತೋಷ ಬೇಕು ಎಂದರೆ ಭೌತಿಕ ಸುಖ ತ್ಯಜಿಸಬೇಕು’ ಎಂದು ಆಗಾಗ ಹೇಳುತ್ತಿರುತ್ತಾರೆ. ಆದರೆ, ಇದೇ ಜಯಾ ಕಿಶೋರಿ ಅವರು ಅದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ ಕೋಲ್ಕತ್ತದ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ಜಯಾ ಕಿಶೋರಿ ಅವರು ಡಿಯೋರ್ (dior) ಕಂಪನಿಯ ಬರೋಬ್ಬರಿ ₹2 ಲಕ್ಷ ಮೌಲ್ಯದ ಹ್ಯಾಂಡ್ ಬ್ಯಾಗ್ ಅನ್ನು ತಮ್ಮ ಜೊತೆ ಕೊಂಡೊಯ್ಯುತ್ತಿದ್ದರು.
ಈ ಚಿತ್ರವನ್ನು ಹಂಚಿಕೊಂಡು ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಜಯಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರ ಹಳೆಯ ವಿಡಿಯೊಗಳ ಜೊತೆ ಐಷಾರಾಮಿ ಬ್ಯಾಗ್ ಇರುವ ವಿಡಿಯೊ ಹಾಕಿಕೊಂಡು ಟೀಕಿಸಿದ್ದಾರೆ.
ವಾಗ್ಮಿ ಜಯ ಕಿಶೋರಿ ಜೀವನದಲ್ಲಿ ಕಾಂಟ್ರೋವರ್ಸಿ ಇದೇ ಮೊದಲಲ್ಲ. 13 ಲಕ್ಷದ ವಾಚ್ ಧರಿಸಿದ್ದ ಜಯ ಕಿಶೋರಿ ಸಾಕಷ್ಟು ಸುದ್ದಿಯಾಗಿದ್ದರು. ಇದೀಗ ಏರ್ ಪೋರ್ಟ್ ನಲ್ಲಿ ಕ್ರಿಶ್ಚಿಯನ್ ಡಿಯಾರ್ ಕಂಪನಿ ಬ್ಯಾಗ್ ಅನ್ನು ಕೈಯಲ್ಲಿ ಹಿಡಿದಿರುವ ಜಯ ಕಿಶೋರಿ ಮತ್ತೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಯಾರು ಈ ಜಯ ಕಿಶೋರಿ?
ಆಧ್ಯಾತ್ಮಿಕ ವಾಗ್ಮಿ ಜಯ ಕಿಶೋರಿ ಅವರು ಮೂಲತಃ ಪಶ್ಚಿಮ ಬಂಗಾಳ ಮೂಲದವರು. ಜುಲೈ 13, 1995ರಂದು ಕೋಲ್ಕತ್ತಾದಲ್ಲಿ ಜನಿಸಿದ್ದಾರೆ. 7 ವರ್ಷ ವಯಸ್ಸಲ್ಲೇ ಆಧ್ಯಾತ್ಮಿಕ ಚಿಂತನೆ ಬಗ್ಗೆ ಒಲವು ಹೊಂದಿರುವ ಜಯ, ತಮ್ಮ ಆಧ್ಯಾತ್ಮಿಕ ಭಾಷಣದಿಂದ ಹಾಗೂ ಶ್ರೀಕೃಷ್ಣನ ಭಜನೆಗಳಿಂದ ಉತ್ತರ ಭಾರತದಲ್ಲಿ ಸಾಕಷ್ಟು ಬೆಂಬಲಿಗರನ್ನು ಹೊಂದಿದ್ದಾರೆ.