ಕರ್ನಾಟಕ ಮೂಲದ ಪ್ರಭಾ ಹತ್ಯೆ: ಸುಳಿವು ನೀಡಿದವರಿಗೆ 1 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ ಆಸ್ಟ್ರೇಲಿಯಾ

Prasthutha|

ಸಿಡ್ನಿ: ಸುಮಾರು ಒಂದು ದಶಕದ ಹಿಂದೆ ನಡೆದ ಕರ್ನಾಟಕ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಪ್ರಭಾ ಅರುಣ್ ಕುಮಾರ್ ಅವರ ಹತ್ಯೆ ಪ್ರಕರಣ ಬಗೆಹರಿಸಲು ಸಹಾಯ ಮಾಡುವ ವ್ಯಕ್ತಿಗೆ 1 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಆಸ್ಟ್ರೇಲಿಯಾದ ನ್ಯೂ ಸೌತ್‌ ವೇಲ್ಸ್ ಸರ್ಕಾರ ಘೋಷಣೆ ಮಾಡಿದೆ.

- Advertisement -

ಪ್ರಭಾ ಅರುಣ್ ಕುಮಾರ್ ಅವರನ್ನು 2015ರ ಮಾರ್ಚ್ 7ರಂದು ಸಿಡ್ನಿಯ ಪಶ್ಚಿಮದಲ್ಲಿನ ಪರಮಟ್ಟ ಪಾರ್ಕ್‌ನಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ 41 ವರ್ಷದ ಪ್ರಭಾ ಅವರ ಕತ್ತಿಗೆ ಇರಿದು ಹತ್ಯೆ ಮಾಡಲಾಗಿತ್ತು. ಘಟನೆ ನಡೆದು 10 ವರ್ಷಗಳಾಗುತ್ತಾ ಬಂದರೂ ಈವರೆಗೂ ಹಂತಕರ ಸುಳಿವು ದೊರಕಿಲ್ಲ. ಇದು ಆಸ್ಟ್ರೇಲಿಯಾ ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ತನಿಖೆ ಸಂದರ್ಭದಲ್ಲಿ ಪೊಲೀಸ್ ಪಡೆಯ ಪತ್ತೇದಾರರು ಅನೇಕ ಹಂತದ ವಿಚಾರಣೆಗಳನ್ನು ನಡೆಸಿದ್ದಾರೆ. ಮಾಹಿತಿಗಾಗಿ ಸಾರ್ವಜನಿಕರ ನೆರವಿಗಾಗಿ ಹಲವು ಬಾರಿ ಮನವಿಗಳನ್ನು ಮಾಡಲಾಗಿದೆ. ಆದರೂ ಈ ಪ್ರಕರಣ ಬಗೆಹರಿಯದೆ ಉಳಿದಿದೆ” ಎಂದು ಎನ್‌ಎಸ್‌ಡಬ್ಲ್ಯೂ ಪೊಲೀಸರು ಹೇಳಿಕೆ ನೀಡಿದ್ದಾರೆ.

- Advertisement -

ಬೆಂಗಳೂರಿನ ಮೈಂಡ್ ಟ್ರೀ ಕಂಪೆನಿಯ ಉದ್ಯೋಗಿಯಾಗಿದ್ದ ಪ್ರಭಾ ಅವರು ಕರ್ತವ್ಯದ ನಿಯೋಜನೆ ಮೇರೆಗೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಬೆಂಗಳೂರಿನಲ್ಲಿದ್ದ ಪತಿ ಅರುಣ್ ಕುಮಾರ್ ಜತೆ ಫೋನ್‌ನಲ್ಲಿ ಮಾತನಾಡುತ್ತಾ ತೆರಳುತ್ತಿದ್ದ ಅವರಿಗೆ ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಅನುಮಾನ ಮೂಡಿತ್ತು. ಅದನ್ನು ಪತಿ ಬಳಿ ಹೇಳಿದ್ದರು. ಅದೇ ವೇಳೆ ಅವರ ಮೇಲೆ ದಾಳಿ ನಡೆದಿತ್ತು. ಅವರು ವಾಸವಿದ್ದ ಸ್ಥಳದಿಂದ ಕೇವಲ 300 ಮೀಟರ್ ದೂರದಲ್ಲಿ ಈ ಹತ್ಯೆ ನಡೆದಿತ್ತು.




Join Whatsapp