ನವದೆಹಲಿ: ಆಮ್ ಆದ್ಮಿ ಪಕ್ಷದ ಸಂಚಾಲಕ, ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಹತ್ಯೆಗೆ ದೊಡ್ಡ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿರುವ ಎಎಪಿ, ಕೇಜ್ರಿವಾಲ್ ಅವರಿಗೆ ಏನಾದರೂ ಸಂಭವಿಸಿದರೆ ಅದಕ್ಕೆ ಬಿಜೆಪಿಯೇ ಹೊಣೆ ಎಂದಿದೆ.
ಪಶ್ಚಿಮ ದೆಹಲಿಯ ವಿಕಾಸಪುರಿಯಲ್ಲಿ ಪಾದಯಾತ್ರೆ ನಡೆಸುತ್ತಿರುವ ವೇಳೆ ಕೇಜ್ರಿವಾಲ್ ಅವರ ಮೇಲೆ ಬಿಜೆಪಿ ಗೂಂಡಾಗಳು ದಾಳಿ ನಡೆಸಿದ್ದರು ಎಂದು ಶುಕ್ರವಾರ ಎಎಪಿ ನಾಯಕರು ಆರೋಪಿಸಿದ್ದರು.
ದಾಳಿ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಎಎಪಿ ರಾಜ್ಯ ಸಭಾ ಸಂಸದ ಸಂಜಯ್ ಸಿಂಗ್, ‘ಘಟನೆಯಲ್ಲಿ ಪೊಲೀಸರು ಭಾಗಿಯಾಗಿರುವುದು ಕೇಜ್ರಿವಾಲ್ ಅವರ ಹತ್ಯೆಗೆ ಪಿತೂರಿ ನಡೆಯುತ್ತಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಕೇಜ್ರಿವಾಲ್ ಅವರ ಜೀವಕ್ಕೆ ಬಿಜೆಪಿ ದೊಡ್ಡ ಶತ್ರುವಾಗಿದೆ’ ಎಂದು ದೂರಿದರು.
ಸಿಂಗ್ ಅವರ ಆರೋಪದ ಬಗ್ಗೆ ಪೊಲೀಸರಿಂದಾಗಲಿ, ಬಿಜೆಪಿಯಿಂದಾಗಲಿ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ.
‘ವಿಕಾಸಪುರಿ ಘಟನೆಯ ಹೊರತಾಗಿಯೂ ಕೇಜ್ರಿವಾಲ್ ಅವರು ನಿಗದಿಯಂತೆ ಪಾದಯಾತ್ರೆ ಮುಂದುವರಿಸಲಿದ್ದಾರೆ’ ಎಂದು ಸಿಂಗ್ ತಿಳಿಸಿದರು.