ಲಕ್ನೋ: ಜ್ಞಾನವಾಪಿ ಸಂಕೀರ್ಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಹೆಚ್ಚುವರಿ ಸಮೀಕ್ಷೆಗೆ ಹಿಂದೂ ಪರವಾಗಿ ಸಲ್ಲಿಸಿದ್ದ ಮನವಿಯನ್ನು ವಾರಣಾಸಿ ನ್ಯಾಯಾಲಯ ವಜಾಗೊಳಿಸಿದೆ.
ವಾರಣಾಸಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಯುಗುಲ್ ಶಂಭು ಅವರ ಪೀಠವು, ಅರ್ಜಿಯನ್ನು ವಜಾಗೊಳಿಸಿದೆ.
ಹೆಚ್ಚುವರಿ ಸಮೀಕ್ಷೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದ ವಕೀಲ ವಿಜಯ್ ಶಂಕರ್ ರಸ್ತೋಗಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಆದೇಶವನ್ನು ಪರಿಶೀಲಿಸಲಾಗುವುದು. ಆ ಬಳಿಕ ಅಲಹಾಬಾದ್ ಹೈಕೋರ್ಟ್ ಅಥವಾ ಜಿಲ್ಲಾ ನ್ಯಾಯಾಲಯದ ಮೊರೆ ಹೋಗುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ರಸ್ತೋಗಿ ಇಡೀ ಜ್ಞಾನವಾಪಿ ಸಂಕೀರ್ಣದ ಸಮಗ್ರ ಸಮೀಕ್ಷೆಯನ್ನು ನಡೆಸಲು ಎಎಸ್ ಐಗೆ ಆದೇಶ ನೀಡುವಂತೆ ಕೋರಿ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ನಾವು ಸಂಪೂರ್ಣ ಜ್ಞಾನವಾಪಿ ಸಂಕೀರ್ಣದ ಸಮೀಕ್ಷೆ ನಡೆಸಲು ಎಎಸ್ಐಗೆ ಆದೇಶ ನೀಡುವಂತೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವೆ ಎಂದು ಹೇಳಿದ್ದರು.