ಚನ್ನಪಟ್ಟಣ: ನಮ್ಮ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ವಿರುದ್ಧ ಸ್ವತಃ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ, ಅವರ ಪತ್ನಿ, ಪುತ್ರ ಸೇರಿದಂತೆ ಯಾರೇ ಸ್ಪರ್ಧಿಸಿದರೂ ಸೋಲು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ. ಯೋಗೇಶ್ವರ್ ನಾಮಪತ್ರ ಸಲ್ಲಿಕೆಗೆ ಮುಂಚೆ ನಡೆದ ರೋಡ್ ಷೋನಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕ್ಷೇತ್ರದಿಂದ ಎರಡು ಸಲ ಗೆದ್ದು ಒಮ್ಮೆ ಮುಖ್ಯಮಂತ್ರಿಯಾದರೂ ಕುಮಾರಸ್ವಾಮಿ ತಾಲ್ಲೂಕಿನಲ್ಲಿ ಯಾವುದೇ ಅಭಿವೃದ್ಧಿ ಮಾಡಲಿಲ್ಲ. ಈಗ ಎಲ್ಲಾ ಬಿಟ್ಟು ಮಂಡ್ಯ ಹಿಡಿದುಕೊಂಡಿದ್ದಾರೆ. ಈ ಕ್ಷೇತ್ರದಲ್ಲಿ ಕೆರೆಗಳು ತುಂಬಿದ್ದರೆ ಅದಕ್ಕೆ ಯೋಗೇಶ್ವರ್ ಕಾರಣ. ಅಭಿವೃದ್ಧಿ ಪರ ಕೆಲಸ ಮಾಡುವ ಇಂತಹ ನಮ್ಮ ಅಭ್ಯರ್ಥಿಯನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದರು.
ಐದು ಸಲ ಶಾಸಕರಾಗಿ, ಎರಡು ಸಲ ಸಚಿವರಾಗಿರುವ ಯೋಗೇಶ್ವರ್ ಮೂಲತಃ ಕಾಂಗ್ರೆಸ್ ನವರು. ನಮ್ಮ ಪಕ್ಷಕ್ಕೆ ವಾಪಸ್ ಬಂದ ಅವರನ್ನು ಅಭ್ಯರ್ಥಿ ಮಾಡಿದ್ದೇವೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್ ಜನಪ್ರಿಯ ರಾಜಕಾರಣಿ. ಅವರಿಂದ ಕ್ಷೇತ್ರವು ಮತ್ತಷ್ಟು ಅಭಿವೃದ್ಧಿಯಾಗಲಿದೆ ಎಂದರು.