ಮಂಗಳೂರು: ಮಾನವೀಯತೆ ಮೆರೆದ ಮಹಿಳಾ ಪೊಲೀಸ್ ಮುರ್ಶಿದಾ ಬಾನು

Prasthutha|

ಮಂಗಳೂರು: ಅಪಘಾತಕ್ಕೀಡಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯೊಬ್ಬರನ್ನು ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಒಬ್ಬರು ತನ್ನ ಸ್ಕೂಟರಿನಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಘಟನೆ ಮಂಗಳೂರಿನಲ್ಲಿ ನಡೆದಿದೆ.

- Advertisement -

ಕದ್ರಿ ಪೊಲೀಸ್ ಠಾಣೆಯಲ್ಲಿ ರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುತ್ತಿದ್ದ ಮುರ್ಶಿದಾ ಬಾನು ಬುಧವಾರ ನಸುಕಿನ ನಾಲ್ಕು ಗಂಟೆ ವೇಳೆಗೆ ಕರ್ತವ್ಯಕ್ಕೆ ತೆರಳುತ್ತಿದ್ದರು. ಈ ವೇಳೆ, ಕೆಪಿಟಿ ಬಳಿಯ ವ್ಯಾಸನಗರದ ತಿರುವಿನಲ್ಲಿ ರಸ್ತೆ ಬದಿ ನಿಂತಿದ್ದ ಟ್ರಕ್ ಒಂದಕ್ಕೆ ಕೋಳಿ ಸಾಗಾಟದ ಪಿಕಪ್ ವಾಹನ ಡಿಕ್ಕಿಯಾಗಿತ್ತು. ಡಿಕ್ಕಿಯಾದ ರಭಸಕ್ಕೆ ಪಿಕಪ್ ಮುಂಭಾಗ ನಜ್ಜುಗುಜ್ಜಾಗಿದ್ದು, ವಾಹನದ ಕ್ಲೀನರ್ ತೀವ್ರ ಗಾಯಗೊಂಡಿದ್ದ.

ಕೈ, ಕಾಲು ಮತ್ತು ಮುಖಕ್ಕೆ ಜಜ್ಜಿದ ಗಾಯವಾಗಿದ್ದರಿಂದ ರಕ್ತ ಒಸರುತ್ತಿತ್ತು. ಚಾಲಕನಿಗೂ ಸ್ವಲ್ಪ ಏಟಾಗಿದ್ದರೂ, ಏನೂ ಮಾಡಲಾಗದೆ ಕೈಚೆಲ್ಲಿ ನಿಂತಿದ್ದ. ಈ ವೇಳೆ, ಮಹಿಳಾ ಪೇದೆ ಮುರ್ಶಿದಾ ಬಾನು ತನ್ನ ಸ್ಕೂಟರಿನಲ್ಲಿ ಠಾಣೆಯತ್ತ ತೆರಳುತ್ತಿದ್ದರು. ಚಾಲಕನ ಬೊಬ್ಬೆ ಕೇಳಿ ಹತ್ತಿರ ಹೋಗಿದ್ದು, ರಕ್ತದಲ್ಲಿ ಬಿದ್ದುಕೊಂಡಿದ್ದ ಕ್ಲೀನರ್ ಯುವಕನನ್ನು ಎತ್ತಿ ಎಜೆ ಆಸ್ಪತ್ರೆಗೆ ಒಯ್ದಿದ್ದಾರೆ.

- Advertisement -

ನಿಲ್ಲುವ ಸ್ಥಿತಿಯಲ್ಲಿ ಇಲ್ಲದಿದ್ದರೂ, ಆಟೋ ಸಿಗದ ಕಾರಣ ತನ್ನ ಸ್ಕೂಟರಿನಲ್ಲೇ ಒಂದು ಕೈಯಲ್ಲಿ ಆತನನ್ನು ಹಿಡಿದುಕೊಂಡು ಆಸ್ಪತ್ರೆಗೆ ತಲುಪಿಸಿದ್ದಾರೆ. ಅಲ್ಲಿ ಉರ್ವಾ ಠಾಣೆಯ ಪಿಸಿಆರ್ ಪೊಲೀಸರು ಇದ್ದುದರಿಂದ ಅವರ ಸಹಾಯದಲ್ಲಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಬಳಿಕ ಕದ್ರಿ ಟ್ರಾಫಿಕ್ ಪೊಲೀಸರಿಗೆ ವಿಷಯ ತಿಳಿಸಿ ಅಪಘಾತ ಸ್ಥಳಕ್ಕೆ ಬರಹೇಳಿದ್ದಾರೆ. ರಸ್ತೆ ಬದಿಯಲ್ಲಿದ್ದ ಪಿಕಪ್ ವಾಹನ ಮತ್ತು ಚಾಲಕನಿಗೆ ಬದಲಿ ವ್ಯವಸ್ಥೆ ಮಾಡಿಸಿದ್ದಾರೆ.

ಪಿಕಪ್ ವಾಹನ ಕೇರಳ ನೋಂದಣಿ ಹೊಂದಿತ್ತು. ಅವರ ಹೆಸರೇನೆಂದು ತಿಳಿದಿಲ್ಲ ಎಂದು ಮುರ್ಶಿದಾ ಬಾನು ಹೇಳಿದ್ದಾರೆ.

ಮುರ್ಶಿದಾ ಅವರು ಕದ್ರಿ ಪೊಲೀಸ್ ಠಾಣೆಯಲ್ಲಿ ಕಳೆದ ಎರಡು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮುರ್ಶಿದಾ ಸಮಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.



Join Whatsapp