ಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವಾಗಲಿದೆ : ಮಂಜುನಾಥ್ ಭಂಡಾರಿ ವಿಶ್ವಾಸ

Prasthutha|

- Advertisement -

ಮಂಗಳೂರು : ದಕ್ಷಿಣ ಕನ್ನಡ- ಉಡುಪಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಕಾಂಗ್ರೆಸ್ ಪಕ್ಷವು ವ್ಯವಸ್ಥಿತವಾಗಿ ಮತ್ತು ಸಂಘಟಿತವಾಗಿ ಚುನಾವಣೆ ನಡೆಸಿದ್ದು, ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ ಗೆಲ್ಲುವ ವಿಶ್ವಾಸ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಹೇಳಿದರು.

ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕಾಂಗ್ರೆಸ್ ಯೋಗ್ಯ ಅಭ್ಯರ್ಥಿಯನ್ನು ಕೊಟ್ಟಿರುವ ಕಾರಣಕ್ಕೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಪಕ್ಷಭೇದ ಮರೆತು ರಾಜು ಪೂಜಾರಿ ಅವರನ್ನು ಬೆಂಬಲಿಸಿದ್ದಾರೆ ಎಂದರು. ಈ ಚುನಾವಣೆ ಪಕ್ಷ ಸಂಘಟನೆ ಮಾಡಲು ಅನುಕೂಲ ಮಾಡಿಕೊಟ್ಟಿದೆ ಎಂದು ಅವರು ಹೇಳಿದರು.

- Advertisement -

ಕಸ್ತೂರಿ ರಂಗನ್ ವರದಿ ವಿರೋಧಿಸಿ ಉಡುಪಿ ಜಿಲ್ಲೆಯ ಕೆರಾಡಿ ಮತ್ತು ಜಡ್ಕಲ್‌ನಲ್ಲಿ‌ ಮತದಾನ ಬಹಿಷ್ಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಬಹಿಷ್ಕಾರ ಒಳ್ಳೆಯದಲ್ಲ, ಮತದಾನದ ಹಕ್ಕು ಚಲಾಯಿಸಿ ಬೇಡಿಕೆ ಇಡಬೇಕು ಎಂದು ಕಿವಿಮಾತು ಹೇಳಿದರು. ಕಸ್ತೂರಿ ರಂಗನ್ ವರದಿ ಜಾರಿ ಮಾಡಲ್ಲ ಎಂಬುದು ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವು ಎಂದು‌ ಸ್ಪಷ್ಟಪಡಿಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿ, ನನ್ನ ಪರ ಹಗಲಿರುಳು ದುಡಿದ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ಕಾಂಗ್ರೆಸ್ ದ.ಕ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್, ಉಡುಪಿ ಜಿಲ್ಲಾ ಕಾಂಗ್ರೆಸ್ ಕಾರ್ಯಧ್ಯಕ್ಷ ಕಿಸಾನ್ ಹೆಗ್ಡೆ, ಕಾಂಗ್ರೆಸ್ ಮುಖಂಡರಾದ ವಿಕಾಸ್ ಶೆಟ್ಟಿ ಮತ್ತು ಲಾರೆನ್ಸ್ ಡಿಸೋಜಾ ಉಪಸ್ಥಿತರಿದ್ದರು.



Join Whatsapp