ಬಾಬಾ ಸಿದ್ದಿಕಿ ಅವರನ್ನು ಹಿಂಬಾಲಿಸಿ ಕೊಂದ ಹಂತಕರು
ಮುಂಬೈ : ಮಹಾರಾಷ್ಟ್ರದ ಪ್ರಭಾವಿ ರಾಜಕಾರಣಿ ಬಾಬಾ ಸಿದ್ದಿಕಿ ಅವರ ಹತ್ಯೆ ಮಹಾರಾಷ್ಟ್ರ ಸರ್ಕಾರಕ್ಕೆ ಮತ್ತು ಭದ್ರತಾ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ. ವೈ ಶ್ರೇಣಿಯ ಭದ್ರತೆಯಲ್ಲಿದ್ದ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯಾಗಿರುವುದು ಅಲ್ಲಿನ ಭದ್ರತಾ ವ್ಯವಸ್ಥೆ ಮತ್ತು ಗುಪ್ತಚರ ಇಲಾಖೆ ಬಗ್ಗೆ ಅನುಮಾನ ಮೂಡುವುದಕ್ಕೆ ಕಾರಣವಾಗಿದೆ. ಬಾಬಾ ಸಿದ್ದಿಕಿ ಹತ್ಯೆಯ ಹೊಣೆ ಹೊತ್ತು ಸಿಎಂ ಮತ್ತು ಡಿಸಿಎಂ ರಾಜೀನಾಮೆ ನೀಡಬೇಕೆಂದು ವಿಪಕ್ಷ ನಾಯಕರ ಒತ್ತಾಯ ಮಾಡಿದ್ದಾರೆ.
ಸದ್ಯ ತಿಳಿದುಬಂದಿರುವ ಮಾಹಿತಿ ಪ್ರಕಾರ 15 ದಿನಗಳ ಹಿಂದೆ ಬಾಬಾ ಸಿದ್ದಿಕಿ ಅವರಿಗೆ ಕೊಲೆ ಬೆದರಿಕೆ ಬಂದಿತ್ತು. ಆ ಬಳಿಕ ಸರಕಾರ ಅವರಿಗೆ ವೈ ಕೆಟಗರಿ ಭದ್ರತೆ ನೀಡಿತ್ತು. ಕೊಲೆ ಬೆದರಿಕೆ ಕರೆ ಬಳಿಕ ಬಾಬಾ ಸಿದ್ದಿಕಿ ಅವರ ಭದ್ರತೆಯನ್ನು ಹೆಚ್ಚಿಸಿತ್ತು. ವೈ ಶ್ರೇಣಿಯ ಭದ್ರತಾ ವ್ಯವಸ್ಥೆಯಲ್ಲಿ ಓರ್ವ ಎನ್‌ಎಸ್‌ಜಿ ಕಮಾಂಡೋ ಸೇರಿ 10ರಷ್ಟು ಭದ್ರತಾ ಸಿಬ್ಬಂದಿ ಭದ್ರತೆ ನೀಡುತ್ತಾರೆ. ಆದರೆ ವೈ ಶ್ರೇಣಿಯ ಭದ್ರತೆಯಲ್ಲಿರುವಾಗಲೇ ಬಾಬಾ ಸಿದ್ದಿಕಿ ಹತ್ಯೆಯಾಗಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖಾ ಮಾಹಿತಿ ಪ್ರಕಾರ ಸಿದ್ದಿಕಿ ಅವರನ್ನು ಮೂವರು ಶಾರ್ಪ್ ಶೂಟರ್‌ಗಳು ಕಳೆದ ಕೆಲ ದಿನಗಳಿಂದ ಹಿಂಬಾಲಿಸಿ ಹೊಂಚು ಹಾಕಿ ಹತ್ಯೆ ಮಾಡಿದ್ದಾರೆ. ಮೂವರು ಹಂತಕರ ತಂಡ ಕೆಲ ದಿನಗಳ ಕಾಲ ಸಿದ್ದಿಕಿ ಅವರನ್ನು ಹಿಂಬಾಲಿಸಿತ್ತು. ಸಿದ್ದಿಕಿ ಅವರ ದಿನಚರಿ, ಚಲನವಲನ ಮತ್ತು ಭದ್ರತೆ ಮೇಲೆ ಕಣ್ಣಿಟ್ಟಿದ್ದರು.
ವಾಟ್ಸಪ್ ಕಾಲ್ ಮೂಲಕ ಶಾರ್ಪ್ ಶೂಟರ್‌ಗಳಿಗೆ ಮೇಲಿಂದ ನಿರ್ದೇಶನ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಆ ಸೂಚನೆಗಳನ್ನು ಪಾಲಿಸಿಕೊಂಡು ಶಾರ್ಪ್ ಶೂಟರ್‌ಗಳು ಬಾಬಾ ಸಿದ್ದಿಕಿಗೆ ಗುಂಡಿಕ್ಕಿದ್ದಾರೆ. ಅದಕ್ಕಾಗಿ ವಿಜಯ ದಶಮಿ ಹಬ್ಬದ ಆಚರಣೆಯ ಕ್ಷಣವನ್ನೇ ಬಳಸಿಕೊಂಡಿದ್ದರು.
ಕಳೆದ ರಾತ್ರಿ ವಿಜಯದಶಮಿ ಆಚರಣೆಯ ವಾತಾವರಣವನ್ನು ಬಳಸಿಕೊಂಡ ಶಾರ್ಪ್ ಶೂಟರ್‌ಗಳು ಬಾಬಾ ಸಿದ್ದಿಕಿ ಅವರಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಪಟಾಕಿ ಸಿಡಿಸುತ್ತಿದ್ದ ಸಮಯದಲ್ಲೇ ಬಾಬಾ ಸಿದ್ದೀಕಿ ಮೇಲೆ ಗುಂಡಿನ ದಾಳಿ ನಡೆದಿದೆ. ಫೈರಿಂಗ್ ಮಾಡುವ ಶಬ್ಧ ಗೊತ್ತಾಗಬಾರದು ಎಂಬ ಕಾರಣಕ್ಕೆ ಪಟಾಕಿ ಸಿಡಿಸುವ ಸಮಯವನ್ನೇ ದಾಳಿಗೆ ಬಳಸಿಕೊಂಡಿದ್ದರು. ಬಾಬಾ ಸಿದ್ದಿಕಿ ಹತ್ಯೆಗೆ ಆಧುನಿಕ 9.9 ಎಂಎಂ ಪಿಸ್ತೂಲ್ ಬಳಸಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ವೈ ಕೆಟಗರಿ ಭದ್ರತೆಯಲ್ಲಿದ್ದ ಬಾಬಾ ಸಿದ್ದಿಕಿ ಅವರ ಹತ್ಯೆ ದೊಡ್ಡ ಭದ್ರತಾ ಲೋಪ ಎಂಬ ಟೀಕೆಗೆ ಗುರಿಯಾಗಿದೆ. ವಿರೋಧ ಪಕ್ಷಗಳ ನಾಯಕರು ಭದ್ರತಾ ವೈಫಲ್ಯದ ಆರೋಪ ಹೊರಿಸಿದ್ದಾರೆ. ಸಿಎಂ ಶಿಂಧೆ, ಡಿಸಿಎಂ ಅಜಿತ್ ಪವಾರ್ ಮತ್ತು ಫಡ್ನವಿಸ್ ರಾಜೀನಾಮಗೆ ಆಗ್ರಹಿಸಿದ್ದಾರೆ. ಈ ರೀತಿ ಪ್ರಭಾವಿ ನಾಯಕನ ಹತ್ಯೆ ನಡೆಯುವುದಾದರೆ ಮಹಾರಾಷ್ಟ್ರದ ಸಾಮಾನ್ಯ ಜನರ ಜೀವಕ್ಕೆ ರಕ್ಷಣೆ ಎಲ್ಲಿದೆ ಎಂದು ವಿಪಕ್ಷ ನಾಯಕರು ಪ್ರಶ್ನಿಸಿದ್ದಾರೆ.