ಮುಮ್ತಾಝ್ ಅಲಿ ನಿಗೂಢ ಸಾವು ಪ್ರಕರಣ: ವಿಚಾರಣೆಗೆ ಹಾಜರಾಗುವಂತೆ ಮಂಗಳೂರಿನ ಇಬ್ಬರು ಉದ್ಯಮಿಗಳಿಗೆ ಪೊಲೀಸರಿಂದ ನೋಟಿಸ್?

Prasthutha|

- Advertisement -

ಮಂಗಳೂರು: ಸಾಮಾಜಿಕ ಮುಂದಾಳು ಮತ್ತು ಉದ್ಯಮಿ ಮುಮ್ತಾಝ್ ಅಲಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಮಂಗಳೂರಿನ ಇಬ್ಬರು ಉದ್ಯಮಿಗಳಿಗೆ ಕಾವೂರು ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.

- Advertisement -

ವಿಚಾರಣೆಗೆ ಹಾಜರಾಗಲು ತನಿಖಾಧಿಕಾರಿಗಳಿಂದ ನೋಟಿಸ್ ಪಡೆದಿರುವ ಇಬ್ಬರು ಉದ್ಯಮಿಗಳು ಮೃತ ಮುಮ್ತಾಝ್ ಅಲಿ ಅವರಿಗೆ ಆಪ್ತರಾಗಿದ್ದರು ಎಂದು ಹೇಳಲಾಗುತ್ತಿದ್ದು ಶೀಘ್ರದಲ್ಲೇ ಆ ಇಬ್ಬರು ಉದ್ಯಮಿಗಳು ಪೊಲೀಸರ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ವಿಚಾರಣೆಗಾಗಿ ನೋಟಿಸ್ ಪಡೆದಿರುವ ಇಬ್ಬರು ಉದ್ಯಮಿಗಳ ಪೈಕಿ ಒಬ್ಬರು ಬಿಲ್ಡರ್ ಮತ್ತು ಶಿಕ್ಷಣ ಸಂಸ್ಥೆಯ ಮಾಲೀಕ ಎಂದು ಹೇಳಲಾಗುತ್ತಿದೆ. ಅವರ ಮೇಲೆ‌ ಮುಮ್ತಾಝ್ ಅಲಿ ಅವರಿಗೆ ಸಂಬಂಧಿಸಿದ ಖಾಸಗಿ ಆಡಿಯೋ ಕ್ಲಿಪ್ ಒಂದನ್ನು ವಾಟ್ಸಪ್ ಮೂಲಕ ಇತರರಿಗೆ ಹಂಚಿರುವ ಆರೋಪ ಇದೆ ಎಂದು ಹೇಳಲಾಗುತ್ತಿದೆ.

ನೋಟಿಸ್ ಪಡೆದಿರುವ ಮತ್ತೊಬ್ಬ ಉದ್ಯಮಿಯು ಮೃತ ಮುಮ್ತಾಝ್ ಅಲಿ ಅವರಿಗೆ ಅತ್ಯಾಪ್ತರಾಗಿದ್ದರು ಮತ್ತು ಅವರು ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಮಿತಿಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮುಮ್ತಾಝ್ ಅಲಿ ನಿಗೂಢ ಮರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಕಾವೂರು ಪೊಲೀಸರು ಆರು ಮಂದಿ ಆರೋಪಿಗಳ ಪೈಕಿ ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳ ನೀಡಿರುವ ಮಾಹಿತಿ ಪ್ರಕಾರ ಪೊಲೀಸರು ಮತ್ತಷ್ಟು ಜನರನ್ನು ವಿಚಾರಣೆಗೆ ಒಳಪಡಿಸುತ್ತಿರುವುದು ತಿಳಿದುಬಂದಿದೆ. ಸದ್ಯ ಇಬ್ಬರು ಉದ್ಯಮಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆದಿರುವ ಪೊಲೀಸರು ಮುಂದಿನ ದಿನಗಳಲ್ಲಿ ಮತ್ತಷ್ಟು ಜನರನ್ನು ವಿಚಾರಣೆ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.



Join Whatsapp