ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಯಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯಿಂದಾಗಿ ಲಕ್ಷಾಂತರ ಬಡವರು ಅದರ ಪ್ರಯೋಜನ ಪಡೆಯುತ್ತಿದ್ದಾರೆ.
ಬೆಳಗಾವಿಯಲ್ಲಿ ಮಹಿಳೆಯೊಬ್ಬರು ತಮ್ಮ ಮಗನಿಗೆ ಬೈಕ್ ಕೊಡಿಸಲು ಮುಂಗಡ ಹಣ ಪಾವತಿಸಲು ಗೃಹಲಕ್ಷ್ಮಿ ಹಣವನ್ನು ಬಳಸಿದ್ದಾರೆ.
ಬಾಗವ್ವಾ ನೀಲಪ್ಪ ಸಣ್ಣಕ್ಕಿ ಎಂಬ ಮಹಿಳೆ ತನ್ನ ಮಗನಿಗೆ ಬೈಕ್ ಖರೀದಿಸಲು ಈ ಹಣವನ್ನು ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವಾ ನೀಲಪ್ಪ ಸಣ್ಣಕ್ಕಿ ಎಂಬ ಮಹಿಳೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ ಹಣ ಕೂಡಿಟ್ಟು, ತನ್ನ ಮಗ ರಮೇಶ ನೀಲಪ್ಪ ಸಣ್ಣಕ್ಕಿಗೆ ದ್ವಿಚಕ್ರ ವಾಹನ ಕೊಡಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಶುಕ್ರವಾರ ಬೈಕ್ ಖರೀದಿಸಲು ಮುಂಗಡ ಹಣ ನೀಡಿದ್ದಾರೆ. ಇದಾದ ಬಳಿಕ ರಾಜ್ಯ ಮಹಿಳಾ ಮತ್ತು ಮಕ್ಳಳ ಕಲ್ಯಾಣ ಸಚಿವೆಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪತ್ರದ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಗೃಹಲಕ್ಷ್ಮಿ ಹಣದಿಂದ ಫ್ರಿಡ್ಜ್ ಖರೀದಿ ಮಾಡಿರೋದು, ಅಜ್ಜಿಯೊಬ್ಬರು ಊರಿಗೆ ಹೋಳಿಗೆ ಊಟ ಹಾಕಿಸಿದ್ದು, ಸೊಸೆಗೆ ಅತ್ತೆಯೊಬ್ಬರು ಫ್ಯಾನ್ಸಿ ಅಂಗಡಿ ಹಾಕಿಕೊಟ್ಟಿರೋದು, ಬಡ ಮಹಿಳೆಯೊಬ್ಬರು ಗೃಹಲಕ್ಷ್ಮಿ ಹಣದಲ್ಲಿ ತನ್ನ ಗಂಡನ ಕಣ್ಣಿನ ಆಪರೇಷನ್ ಮಾಡಿಸಿದ್ದು ಸುದ್ದಿಯಾಗಿತ್ತು. ಸದ್ಯ ಬೆಳಗಾವಿಯ ಮಹಿಳೆಯೊಬ್ಬರು ಮಗನಿಗೆ ಬೈಕ್ ತೆಗೆದುಕೊಡಲು ಮುಂಗಡ ಹಣ ಪಾವತಿಸಿರುವುದು ರಾಜ್ಯದ ಗಮನ ಸೆಳೆಯುತ್ತಿದೆ.