ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಯ ಭಾಗದಲ್ಲಿ ರಾತ್ರಿ ಅಪರಿಚಿತ ಡ್ರೋನ್ ಕ್ಯಾಮೆರಾ ಹಾರಿಸಲಾಗಿದೆ.
ನೌಕಾನೆಲೆಯ ಸರಹದ್ದಿನ ಭಾಗದಲ್ಲಿ ನಿಷೇಧವಿದ್ದರೂ ಡ್ರೋನ್ ಹಾರಿಸಿರುವುದು ಹಲವು ಅನುಮಾನ ಮೂಡಿಸಿದೆ.
ಇತ್ತೀಚೆಗೆ ಹನಿಟ್ರಾಪ್ ಮೂಲಕ ಕದಂಬ ನೌಕಾನೆಲೆಯ ಫೋಟೋ ಮತ್ತು ಮಾಹಿತಿಯನ್ನು ಹೊರ ದೇಶದ ಗುಪ್ತಚರ ಸಂಸ್ಥೆಗೆ ನೀಡಿರುವ ಆರೋಪದಡಿ ರಾಷ್ಟ್ರೀಯ ತನಿಖಾ ದಳ ಮೂವರನ್ನು ವಶಕ್ಕೆ ಪಡೆದು ತನಿಖೆ ನಡೆಸಿತ್ತು. ಇದರ ಬೆನ್ನಲ್ಲೇ ವಕ್ಕನಳ್ಳಿ ಭಾಗದಿಂದ ಐಎನ್ ಎಸ್ ಪತಾಂಜಲಿ ಆಸ್ಪತ್ರೆ ಹಿಂಬದಿಯಿಂದ ಬಿಣಗಾ ಚತುಷ್ಪಥ ಹೆದ್ದಾರಿಯ ಸುರಂಗ ಮಾರ್ಗದವರೆಗೂ ಡ್ರೋನ್ ಹಾರಿದ್ದು ಬೈಕ್ ಅಥವಾ ಸನ್ ರೂಫ್ ಕಾರಿನ ಮೂಲಕ ತೆರಳುತ್ತಾ ಈ ಡ್ರೋನ್ ನಿಯಂತ್ರಣ ಮಾಡಿರುವ ಸಂಶಯ ವ್ಯಕ್ತವಾಗಿದೆ.
ಹೆಚ್ಚಿನದಾಗಿ 600 ಮೀ. ಅಥವಾ 1,200 ಮೀ. ದೂರದವರೆಗೆ ಹಾರಾಡುವ ಸಾಮರ್ಥ್ಯದ ಡ್ರೋನ್ ಸ್ಥಳೀಯವಾಗಿ ಬಳಕೆಯಾಗುವುದು ಸಾಮಾನ್ಯ. ಆದರೆ ಈ ಡ್ರೋನ್ ಸುಮಾರು 3 ಕಿ.ಮೀ.ಗೂ ಹೆಚ್ಚು ದೂರ ಹಾರಿದ್ದು ನೌಕಾದಳ ಅಧಿಕಾರಿಗಳು, ಸ್ಥಳೀಯ ಪೊಲಿಸರು ಹಾಗೂ ಗುಪ್ತಚರ ಸಂಸ್ಥೆ ತನಿಖೆಗಿಳಿದಿದೆ.
ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಹಾಗೂ ನೌಕಾದಳದ ಅಧಿಕಾರಿಗಳು ಅರಣ್ಯ ಇಲಾಖೆ, ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್ ಬಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸಂಪರ್ಕಿಸಿದಾಗ ನಾವು ಡ್ರೋನ್ ಬಳಸಿಲ್ಲ ಎಂದು ಹೇಳಿವೆ. ಹೀಗಾಗಿ ಈಗ ನೈಟ್ ವಿಷನ್ ಡ್ರೋನ್ ಬಳಸಿದವರು ಯಾರು ಎನ್ನುವ ಬಗ್ಗೆ ತನಿಖೆ ಆರಂಭಿಸಲಾಗಿದೆ.