ಮಂಗಳೂರು: ಉದ್ಯಮಿ ಮುಮ್ತಾಝ್ ಅಲಿ ಪ್ರಕರಣದಲ್ಲಿ ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆರೋಪಿಗಳು ದೇಶ ಬಿಟ್ಟು ಹೋಗದಂತೆ ಎಲ್ ಒಸಿ ಜಾರಿ ಮಾಡಿದ್ದೇವೆ. ನಿನ್ನೆ ಮುಂಜಾನೆ ಮುಮ್ತಾಝ್ ಅಲಿ ನದಿಗೆ ಹಾರಿರುವ ಮಾಹಿತಿ ಬಂದಿತ್ತು. ಇಂದು ಬೆಳಗ್ಗೆ ಹತ್ತು ಗಂಟೆಗೆ ಮುಮ್ತಾಝ್ ಅಲಿ ಮೃತದೇಹ ಪತ್ತೆಯಾಗಿದೆ. ಮುಮ್ತಾಝ್ ಅಲಿ ಸಹೋದರ ಅವರು ಹನಿಟ್ರ್ಯಾಪ್ ಮಾಡಿದ್ದಾರೆಂದು ಕಾವೂರು ಠಾಣೆಗೆ ದೂರು ನೀಡಿದ್ದಾರೆ ಎಂದರು.
ಹನಿಟ್ರ್ಯಾಪ್ ಮಾಡಿರುವ ಬಗ್ಗೆ ಆರು ಜನರ ಮೇಲೆ ಅವರು ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಹೇಳಿದರು.
ಈ ಬಗ್ಗೆ ತಂಡ ರಚಿಸಿ ಆರೋಪಿಗಳಿಗೆ ಹುಡುಕಾಟ ಮಾಡುತ್ತಿದ್ದೇವೆ. ವಾಯ್ಸ್ ನೋಟ್ ನಲ್ಲಿ ಸತ್ತಾರ್ ಎಂಬಾತನ ಬಗ್ಗೆ ಮುಮ್ತಾಝ್ ಹೇಳಿದ್ದಾರೆ. ಆರೋಪಿ ರೆಹಮತ್ ಗಾಗಿ ಪೊಲೀಸ್ ತಂಡ ಹುಡುಕಾಟ ನಡೆಸುತ್ತಿದೆ. ಆತ್ಮಹತ್ಯೆಗೂ ಮುನ್ನ ಬಸ್ ಗೆ ಮುಮ್ತಾಜ್ ಅಲಿ ಕಾರು ಡಿಕ್ಕಿಯಾಗಿದೆ. ಬಸ್ ನವರ ಹೇಳಿಕೆಯನ್ನೂ ಪಡೆದಿದ್ದೇವೆ ಎಂದು ಹೇಳಿದರು.
ಮುಮ್ತಾಝ್ ಅಲಿಯವರು 50 ಲಕ್ಷ ಹಣ ಕೊಟ್ಟಿದ್ದರು, ಹಾಗೆಯೇ 25 ಲಕ್ಷ ಚೆಕ್ ಮೂಲಕ ನೀಡಿದ್ದರು. ವಾಯ್ಸ್ ಕ್ಲಿಪ್ಪಿಂಗ್ ನಲ್ಲಿ ಮುಮ್ತಾಝ್ ಅಲಿ, ಕೆಲವರ ಹೆಸರು ಉಲ್ಲೇಖ ಮಾಡಿದ್ದಾರೆ. ಆರೋಪಿ ಸತ್ತಾರ್ ಹೆಸರು ವಾಯ್ಸ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ. ಎ1 ಆರೋಪಿ ಮಹಿಳೆ ರೆಹಮತ್ ಸಂಬಂಧಿ ಅಲ್ಲ, ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.
ಕೂಳೂರು ಸೇತುವೆ ಮೇಲೆ ಕಾರು ಇಟ್ಟು ನಾಪತ್ತೆಯಾಗಿದ್ದ ಉದ್ಯಮಿ ಬಿ.ಎಂ. ಮುಮ್ತಾಝ್ ಅಲಿ ಅವರ ಮೃತದೇಹ ಸೋಮವಾರ ಕೂಳೂರು ಸೇತುವೆಯ ಬಳಿ ಪತ್ತೆಯಾಗಿದೆ. ಎನ್ ಡಿ ಆರ್ ಎಫ್, ಎಸ್ ಡಿ ಆರ್ ಎಫ್, ಕೋಸ್ಟ್ ಗಾರ್ಡ್ ಸೇರಿದಂತೆ ಸ್ಥಳೀಯ ನಾಡದೋಣಿ ಮೀನುಗಾರರು ಸೋಮವಾರ ಬೆಳಗ್ಗೆ 6 ಗಂಟೆಯಿಂದ ಹುಡುಕಾಟದಲ್ಲಿ ತೊಡಗಿದ್ದರು. ಮಂಗಳೂರು – ಕೂಳೂರು ಸೇತುವೆ ಬಳಿ ಬೆಳಿಗ್ಗೆ 10:40 ರ ಸುಮಾರಿಗೆ ಸ್ಥಳೀಯ ಮೀನುಗಾರರ ದೋಣಿಗೆ ಮೃತದೇಹ ಪತ್ತೆಯಾಗಿದೆ.