ಸಾಧಕಿಗೆ `ನಾಳಿನ ಭಯೋತ್ಪಾದಕಿ’ ಎಂದು ಅವಹೇಳನ : ಕಿಡಿಗೇಡಿ ವಿರುದ್ಧ FIR ದಾಖಲು

Prasthutha|

ಮಂಗಳೂರು : ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಟೈಕಾಂಡೋ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿರುವ ಸಾಧಕಿಯನ್ನು ನಾಳಿನ ಭಯೋತ್ಪಾದಕಿ ಎಂದು ನಿಂದಿಸಿರುವ ಕಿಡಿಗೇಡಿಯ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.

- Advertisement -


ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಬಳಿಯ ಅಕ್ಕರಂಗಡಿಯ ನಿವಾಸಿ ಹಫೀಝ್ ಅವರ ಪುತ್ರಿ ಆಯಿಶಾ, ಸೆಪ್ಟೆಂರ್ 28ರಂದು ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಟೈಕಾಂಡೋ ಸ್ಪರ್ಧೆಯಲ್ಲಿ 7 ವರ್ಷ ವಯಸ್ಸಿನ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.


ಆಯಿಶಾ ಸಾಧನೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, ಮನಸ್ಸಿನ ಮಾತುಗಳು ಎಂಬ ಪೇಸ್ಬುಕ್ ಗ್ರೂಪ್ ನಲ್ಲಿ ಆಯಿಶಾ ಅವರ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿ ಅಬೂ ಇಸಾಮ್ ಅಕ್ಕರಂಗಡಿ ಎಂಬವರು ಪೋಸ್ಟ್ ಹಾಕಿದ್ದರು. ಆ ಪೋಸ್ಟ್ ಗೆ ಕಾಮೆಂಟ್ ಮಾಡಿರುವ ಹರಿ ಹನುಮಾನ್ ದಾಸ್ ಎಂಬ ಹೆಸರಿನ ಖಾತೆ ಹೊಂದಿರುವ ವ್ಯಕ್ತಿ `ನಾಳಿನ ಭಯೋತ್ಪಾದಕಿ’ ಎಂದು ಅವಹೇಳನ ಮಾಡಿದ್ದಾನೆ. ಆಯಿಶಾ ಮುಸ್ಲಿಂ ಎಂಬ ಕಾರಣಕ್ಕೆ ಕಿಡಿಗೇಡಿ ಹರಿ ಹನುಮಾನ್ ದಾಸ್ ಹೆಸರಿನ ವ್ಯಕ್ತಿ ಜನಾಂಗೀಯ ನಿಂದನೆ ಮಾಡಿದ್ದಾನೆ.

- Advertisement -


ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿರುವ ಕರಾವಳಿಯ ಬಾಲಕಿಯನ್ನು ನಾಳಿನ ಭಯೋತ್ಪಾದಕಿ ಎಂದು ಅವಹೇಳನ ಮಾಡಿರುವ ವ್ಯಕ್ತಿಯ ಕಾಮೆಂಟ್ ವೈರಲ್ ಆಗಿದ್ದು ಜನರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.


ಈ ಬಗ್ಗೆ ಆಯಿಶಾ ಅವರ ತಂದೆ ಹಫೀಝ್ ಅವರು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದು, ಹರಿ ಹನುಮಾನ್ ದಾಸ್ ಹೆಸರಿನ ಕಿಡಿಗೇಡಿಯ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ. ದೂರು ಸ್ಪೀಕರಿಸಿರುವ ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 353(2) ಅಡಿ ಎಫ್ ಐಆರ್ ದಾಖಲಾಗಿದೆ. ಜನಾಂಗೀಯ ನಿಂದನೆ, ಧರ್ಮಗಳ ನಡುವೆ ದ್ವೇಷ ಬಿತ್ತುವ ಸೆಕ್ಷನ್ ಅಡಿ ಈ ಕೇಸ್ ದಾಖಲಾಗಿದ್ದು, ನಿಂದನೆ ಮಾಡಿರುವ ಕಿಡಿಗೇಡಿ ಹರಿ ಹನುಮಾನ್ ದಾಸ್ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಜನಾಂಗೀಯ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಆರೋಪಿಯು ಕಾಮೆಂಟ್ ಮಾಡಿರುವ ಮನಸ್ಸಿನ ಮಾತುಗಳು ಹೆಸರಿನ ಫೇಸ್ಬುಕ್ ಗ್ರೂಪ್ ನಲ್ಲಿ 48 ಸಾವಿರ ಮಂದಿ ಸದಸ್ಯರಿದ್ದಾರೆ. ಈಗಲೂ ಆತನ ಕಾಮೆಂಟ್ ಹಾಗೇ ಇದೆ, ಅದನ್ನು ಅಳಿಸಿ ಹಾಕಿಲ್ಲ. ಇಬ್ಬರು ಸದಸ್ಯರು ಮಾತ್ರ ಅವಹೇಳನದ ಕಾಮೆಂಟ್ ಗೆ ವಿರೋಧ ವ್ಯಕ್ತಪಡಿಸಿದ್ದು ಉಳಿದವರು ಮೌನವಹಿಸಿದ್ದಾರೆ. ಸಾಧಕಿಯನ್ನು ಭಯೋತ್ಪಾದಕಿ ಎಂದು ನಿಂದಿಸಿರುವ ಸದಸ್ಯನನ್ನು ಗ್ರೂಪ್ ನಿಂದ ತೆಗೆದು ಹಾಕುವಂತೆ ಅಡ್ಮಿನ್ ಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.


ಆರೋಪಿ ವಿರುದ್ಧ ಕಾನೂನು ಹೋರಾಟಕ್ಕಿಳಿದಿರುವ ಆಯಿಶಾರ ತಂದೆಗೆ ಬಂಟ್ವಾಳ ಪುರಸಭಾ ಸದಸ್ಯ ಇದ್ರೀಸ್, SDPI ಬಂಟ್ವಾಳ ವಿಧಾನಸಭಾ ಸಮಿತಿಯ ಮುಖಂಡ ಅಹ್ಮದ್ ಕಬೀರ್ ಮತ್ತು SDPI ಅಕ್ಕರಂಗಡಿ ಬೂತ್ ಸದಸ್ಯರು ಸಾಥ್ ನೀಡಿದ್ದರು.



Join Whatsapp