ಫೆಲೆಸ್ತೀನ್ ಪರ ಸ್ಟೇಟಸ್ ಹಾಕಿದ್ದಕ್ಕೆ ಪೊಲೀಸರಿಂದ ಹಲ್ಲೆ ಆರೋಪ: ಕ್ರಮಕ್ಕೆ SDPI ಆಗ್ರಹ

Prasthutha|

ಬಾಗಲಕೋಟೆ: ಫೆಲೆಸ್ತೀನ್ ಪರ ವಾಟ್ಸಾಪ್ ಸ್ಟೇಟಸ್ ಹಾಕಿದ ಹಿನ್ನೆಲೆ ಬಾದಾಮಿ ಪೊಲೀಸ್ ಠಾಣೆಯಲ್ಲಿ ಮುಸ್ಲಿಮ್ ಯುವಕನ ವಿರುದ್ಧ ದೂರು ದಾಖಲಾಗಿತ್ತು.

- Advertisement -


ಈ ಸಂಬಂಧ ಬಾದಾಮಿ ಪಿಎಸ್ ಐ ವಿಠ್ಠಲನಾಯಕ ಹಾಗೂ ಇತರೆ ಕಾನ್ಸ್ಟೇಬಲ್ ಗಳು ವಿಚಾರಣೆ ಹೆಸರಲ್ಲಿ ಯುವಕ ಸೈಯದ್ ಬಾಷಾರನ್ನು ಠಾಣೆಗೆ ಕರೆಸಿ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.


ಸೈಯದ್ ಬಾಷಾ ಮೇಲೆ ದೂರು ದಾಖಲಾದ ಹಿನ್ನೆಲೆ ಸೈಯದ್ ನನ್ನು ವಶಕ್ಕೆ ಪಡೆದು ಪೊಲೀಸರು ಠಾಣೆಗೆ ಕರೆತಂದಿದ್ದರು. ಈ ವೇಳೆ ವಿಚಾರಣೆ ಹೆಸರಲ್ಲಿ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸೆಪ್ಟೆಂಬರ್ 24ರಂದು ಹಲ್ಲೆ ನಡೆದಿದ್ದು, ಜಾಮೀನಿನ ಮೇಲೆ ಸೈಯದ್ ಹೊರಬಂದಾಗ ಪ್ರಕರಣ ಬಯಲಿಗೆ ಬಂದಿದೆ. ಪೊಲೀಸರಿಂದ ಹಲ್ಲೆ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ವಿರುದ್ಧ ಎಸ್ ಡಿಪಿಐ ನಾಯಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಲ್ಲೆಗೈದ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

- Advertisement -


ಈ ಬಗ್ಗೆ SDPI ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಟ್ವೀಟ್ ಮಾಡಿದ್ದು, ಬಾಗಲಕೋಟೆ ಜಿಲ್ಲೆಯಲ್ಲಿ ಇತ್ತೀಚೆಗೆ ಪೋಲೀಸ್ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಟಿಪ್ಪು ಸುಲ್ತಾನ್ ಮತ್ತು ಫೆಲೆಸ್ತೀನ್ ಪರ ಸ್ಟೇಟಸ್ ಹಾಕಿದ ಕಾರಣಕ್ಕೆ ಸೈಯದ್ ಬಾಷಾ ಎಂಬ ಮುಸ್ಲಿಮ್ ಯುವಕನನ್ನು ಬಾದಾಮಿಯ ಪೊಲೀಸರು ಕೈಕಾಲು ಕಟ್ಟಿ ಹಾಕಿ ಸುಮಾರು 2 ಗಂಟೆಗಳ ಕಾಲ ಕ್ರೂರವಾಗಿ ಹಲ್ಲೆ ನಡೆಸಿರುವುದು ಖಂಡನೀಯ. ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಎನ್.ಕೆ. ಸುಧೀಂದ್ರ ರಾವ್ ಅವರ ನೇತೃತ್ವದ ಕರ್ನಾಟಕ ಪೊಲೀಸ್ ದೂರುಗಳ ಪ್ರಾಧಿಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ತಕ್ಷಣ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.



Join Whatsapp