ಅಕ್ರಮ ಭೂ ಮಂಜೂರು ಪ್ರಕರಣದಲ್ಲಿ ಅಧಿಕಾರಿಗಳು ಸೇರಿ ಹಿಂದಿನ ಅವಧಿಯ ಸಚಿವರು ಹೊಣೆಗಾರರು ಎಂಬ ಅಂಶ ಬಯಲಾಗಿರುವುದು ಆಘಾತಕಾರಿ: ಅಪ್ಸರ್ ಕೊಡ್ಲಿಪೇಟೆ

Prasthutha|

ಚಿಕ್ಕಮಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಿಕ್ಕಮಗಳೂರು ಜಿಲ್ಲಾ ಸಮಿತಿ ಸಭೆಯು ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹಾಗೂ ರಾಜ್ಯ ಸಮಿತಿ ಸದಸ್ಯ ಅಡ್ವೊಕೇಟ್ ಅಬ್ದುಲ್ ಮಜೀದ್ ಖಾನ್ ರವರ ಉಪಸ್ಥಿತಿಯಲ್ಲಿ ಜಿಲ್ಲಾ ಕಛೇರಿಯಲ್ಲಿ ಜರುಗಿತು.

- Advertisement -

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ 2023 ರಲ್ಲಿ ಅಕ್ರಮವಾಗಿ ಭೂಮಿ ಮಂಜೂರು ಮಾಡಿರುವ ಕುರಿತು ತನಿಖೆಗೆ ಸರಕಾರ 2023 ಆಗಸ್ಟ್‌ ತಿಂಗಳಲ್ಲಿ 13 ಜನ ತಹಸೀಲ್ದಾರ್‌ಗಳನ್ನು ನೇಮಕ ಮಾಡಿತ್ತು. ಈ ತನಿಖಾ ವರದಿ ಬಂದಿದ್ದು, ಅಕ್ರಮದಲ್ಲಿ ಹಿಂದಿನ ಅವಧಿಯ ಆಡಳಿತವೇ ಭಾಗಿಯಾಗಿರುವ ಕುರಿತು ವರದಿ ಬಂದಿದ್ದೆ.

ಬರೋಬ್ಬರಿ 10,598 ಎಕರೆ ಜಾಗವನ್ನು ಅಕ್ರಮವಾಗಿ ಮಂಜೂರು ಮಾಡಿಕೊಡಲಾಗಿದೆ.

- Advertisement -

ಕಡೂರು ತಾಲೂಕು ವ್ಯಾಪ್ತಿ ಮತ್ತು ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರ ಭಾಗದಲ್ಲಿ ಸಮಿತಿಯ ಅಧ್ಯಕ್ಷರಾಗಿದ್ದ ಶಾಸಕರುಗಳು ಹಾಗೂ ಸಮಿತಿ ಸದಸ್ಯರು ಒಟ್ಟು 2256 ಪ್ರಕರಣಗಳಲ್ಲಿ 5280 ಎಕರೆಯನ್ನು ಅನರ್ಹರಿಗೆ ಮಂಜೂರು ಮಾಡಿರುವುದು ವರದಿಯಲ್ಲಿ ಉಲ್ಲೇಖವಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಸಮಿತಿ ಅಧ್ಯಕ್ಷರಾಗಿದ್ದ ಹಿಂದಿನ ಶಾಸಕರು ಒಟ್ಟು 200 ಪ್ರಕರಣಗಳಲ್ಲಿ 482 ಎಕರೆಯನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ. ಸಮಿತಿಯ ಸದಸ್ಯರು 578 ಪ್ರಕರಣಗಳಲ್ಲಿ 1301 ಎಕರೆಗೂ ಹೆಚ್ಚು ಅಕ್ರಮ ಮಂಜೂರು ಮಾಡಿಸಿದ್ದು, ಈ ಅಕ್ರಮದಲ್ಲಿ ಅಧ್ಯಕ್ಷರು ಸಹ ಹೊಣೆಗಾರರು ಎಂದು ತನಿಖಾ ತಂಡ ತಿಳಿಸಿದೆ.

ಕಡೂರು ತಾಲೂಕಿನಲ್ಲಿಈ ಹಿಂದೆ ತಹಸೀಲ್ದಾರ್‌ಗಳಾಗಿದ್ದ ಎಂ.ಭಾಗ್ಯ, ಜೆ.ಉಮೇಶ್‌, ಎಚ್‌.ವಿಶ್ವನಾಥ್‌, ಕೆ.ಮಹೇಶ್‌ ಚಂದ್ರ, ಧರ್ಮೋಜಿ ರಾವ್‌, ಲಕ್ಷ್ಮಣಪ್ಪ. ಸಿ.ಚಿನ್ನರಾಜು, ನಂಜುಂಡಪ್ಪ ಅನರ್ಹ ಮಂಜೂರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಮೂಡಿಗೆರೆ ತಾಲೂಕಿನಲ್ಲೂ ಈ ಹಿಂದೆ ತಹಸೀಲ್ದಾರ್‌ಗಳಾಗಿದ್ದ ಎಚ್‌.ಎಂ.ರಮೇಶ್‌, ಎಚ್‌.ಡಿ.ಪದ್ಮನಾಭ ಶಾಸ್ತ್ರಿ, ಎಂ.ಎ.ನಾಗರಾಜ್‌, ಸಿ.ಪಿ.ನಂದಕುಮಾರ್‌, ಜಿ.ಎಸ್‌.ಸೈಯದ್‌ ಮುನೀರ್‌, ಮಹೇಶ್ವರಪ್ಪ ಸೇರಿದಂತೆ ಹಲವರ ಹೆಸರನ್ನು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಅಕ್ರಮ ಮಂಜೂರುಗಳಿಗೆ ಭೂಸಕ್ರಮ ಸಮಿತಿ ಅಧ್ಯಕ್ಷರಾಗಿದ್ದ ಶಾಸಕರು, ಅಧಿಕಾರಿಗಳು ಸೇರಿದಂತೆ ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ಅಧಿಕಾರಿಗಳು, ಕಚೇರಿಯ ವಿಷಯ ನಿರ್ವಾಹಕರು, ಶಿರಸ್ತೆದಾರರು, ಭೂಮಿ ಆಪರೇಟರ್‌ಗಳು, ಭೂಮಾಪಕರು, ತಹಸೀಲ್ದಾರರು, ಭೂಸಕ್ರಮೀಕರಣ ಸಮಿತಿ ಅಧ್ಯಕ್ಷರು, ಸದಸ್ಯರು ಹೊಣೆಗಾರರು ಎಂಬುದನ್ನು ತನಿಖಾ ತಂಡದ ವರದಿಯಲ್ಲಿ ಉಲ್ಲೇಖಿಸಿರುವುದು ಆಘಾತಕಾರಿಯಾಗಿದ್ದು, ಅನರ್ಹರಿಗೆ ಅಕ್ರಮವಾಗಿ ಭೂಮಿ ಮಂಜೂರು ಮಾಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಈ ಸಭೆಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮುಬಾರಕ್, ಜಿಲ್ಲಾ ಖಜಾಂಜಿ ಖಾಲಿದ್ ಮೂಡಿಗೆರೆ ಹಾಗೂ ಜಿಲ್ಲಾ ಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು.



Join Whatsapp