ಮೈಸೂರು : ಮುಡಾ ಹಗರಣ ಸಂಬಂಧ ಮೈಸೂರು ಲೋಕಾಯುಕ್ತದಲ್ಲಿ ಎಫ್ ಐಆರ್ ದಾಖಲಾಗುವ ಸಾಧ್ಯತೆ ನಡುವೆ ಇಂದು ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಭೇಟಿ ನೀಡಿದ್ದಾರೆ.
ಮೈಸೂರಿನ ಮಂಡಕಳ್ಳಿ ಏರ್ ಪೋರ್ಟ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ಆಡಳಿತದಲ್ಲಿ ತಲೆಹಾಕಬಾರದು, ರಾಜ್ಯಪಾಲರ ಯಾವ ಪತ್ರಗಳಿಗೂ ಸಿಎಸ್ ಉತ್ತರಿಸಬಾರದು. ಎಲ್ಲಾ ಕಡೆಯು ಸಿಬಿಐ, ಇಡಿ, ರಾಜ್ಯಪಾಲರ ಕಚೇರಿ ದುರ್ಬಳಕೆ ಆಗುತ್ತಿದೆ ಎಂದು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜಭವನ ದುರ್ಬಳಕೆಯಾಗುತ್ತಿದೆ. ನನ್ನ ರಾಜೀನಾಮೆ ಕೇಳಲು ಬಿಜೆಪಿಗೆ ಯಾವ ನೈತಿಕತೆ ಇದೆ. ನಾನು ತಪ್ಪು ಮಾಡಿಲ್ಲ. ಹೀಗಾಗಿ ರಾಜೀನಾಮೆ ಕೊಡಲ್ಲ ಎಂದು ಸಿಎಂ ಸಿದ್ದರಾಮಯ್ಯ ಮತ್ತೆ ಸ್ಪಷ್ಟನೆ ನೀಡಿದರು
ರಾಜ್ಯದ ಜನರು ನಮಗೆ ೫ ವರ್ಷ ಅಧಿಕಾರ ನಡೆಸಿ ಅಭಿವೃದ್ದಿ ಮಾಡಿ ಎಂದು ಅವಕಾಶ ನೀಡಿದ್ದಾರೆ .ಕೇಂದ್ರ ಸರ್ಕಾರ ರಾಜಭವನವನ್ನ ಹಾಗೂ ಎಲ್ಲಾ ಕಡೆ ಸಿಬಿಐ ಇಡಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.ತಮ್ಮ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ನಾನು ಯಾಕೆ ರಾಜೀನಾಮೆ ಕೊಡಬೇಕು. ತಪ್ಪು ಮಾಡಿದ್ದರೇ ಮಾತ್ರ ರಾಜೀನಾಮೆ ಕೊಡಬೇಕು . ಗೋದ್ರಾ ಗಲಭೆ ಆಗಿದ್ದಾಗ ಮೋದಿ ರಾಜೀನಾಮೆ ನೀಡಿದ್ದರಾ ಎಫ್ ಐಆರ್ ಆಗಿ ಜಾಮೀನು ಪಡೆದಿರುವ ಹೆಚ್ಡಿಕೆ ಯಾಕೆ ರಾಜೀನಾಮೆ ಕೊಟ್ಟಿಲ್ಲ. ನಾನು ತಪ್ಪು ಮಾಡಿಲ್ಲ. ರಾಜೀನಾಮೆ ಕೊಡಲ್ಲ. ನನ್ನ ರಾಜೀನಾಮೆ ಕೇಳುವ ನೈತಿಕತೆ ಅವರಿಗಿದೆಯಾ ಎಂದು ಪ್ರಶ್ನಿಸಿದರು. ನಾನು ಕಾನೂನು ಹೋರಾಟ ಮುಂದುವರೆಸುತ್ತೇನೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ಇಲ್ಲವೇ ಇಲ್ಲ ಎಂದರು.