`ಸಿದ್ದರಾಮಯ್ಯರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗೆ ಇಲ್ಲ’ : ಮಂಜುನಾಥ್ ಭಂಡಾರಿ

Prasthutha|

- Advertisement -

ಪ್ರಧಾನಿ ಮೋದಿ ಏಳು ಕೋಟಿ ಕನ್ನಡಿಗರಿಗೆ ಅಪಮಾನ ಮಾಡಿದ್ದಾರೆ’’

ಮಂಗಳೂರು : ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ತಿರುಗೇಟು ನೀಡಿದರು. ಮುಡಾ ಪ್ರಕರಣದಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುವ ಅಗತ್ಯವೂ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.

- Advertisement -


ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ ಎಂಬ ಯಾವ ವರದಿಯೂ ಇಲ್ಲ, ಆದರೂ ಸಿದ್ದರಾಮಯ್ಯ ಮೇಲೆ ಕಳಂಕ ತಂದು ಕಾಂಗ್ರೆಸ್ ಸರಕಾರವನ್ನು ಉರುಳಿಸಲು ಬಿಜೆಪಿ ಹುನ್ನಾರ ಮಾಡಿದೆ ಎಂದು ಆರೋಪಿಸಿದರು.


2011ರಲ್ಲಿ ಅಂದಿನ ಸಿಎಂ ಯಡಿಯೂರಪ್ಪನವರ ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟು ಎಫ್ ಐಆರ್ ದಾಖಲಾದಾಗ ಯಡಿಯೂರಪ್ಪನವರು ರಾಜೀನಾಮೆ ನೀಡಿರಲಿಲ್ಲ, ಬಳಿಕ ಲೋಕಾಯುಕ್ತ ವರದಿಯಲ್ಲಿ ಯಡಿಯೂರಪ್ಪ ತಪ್ಪಿತಸ್ಥ ಎಂದು ಬಂದಾಗ ಅವರು ರಾಜೀನಾಮೆ ನೀಡಿದ್ದರು, ಅಂದು ಎಫ್ ಐಆರ್ ದಾಖಲಾದಾಗ ಯಡಿಯೂರಪ್ಪನವರು ರಾಜೀನಾಮೆ ನೀಡಿದ್ದರೆ ಇಂದು ಸಿದ್ದರಾಮಯ್ಯರ ರಾಜೀನಾಮೆ ಕೇಳುವ ನೈತಿಕತೆ ಬಿಜೆಪಿಗೆ ಇರುತ್ತಿತ್ತು ಎಂದರು.


ಹೈಕಮಾಂಡ್ ರಾಜೀನಾಮೆಗೆ ಸೂಚಿಸಿದರೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಸಿದ್ದರಾಮಯ್ಯ ಬದ್ಧರಾಗಿರುತ್ತಾರೆ ಎಂದರು.


ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿರುವ ಮಾಜಿ ಸ್ಪೀಕರ್ ಕೆಬಿ ಕೋಳಿವಾಡ ಅವರು ವೈಯಕ್ತಿಕ ದ್ವೇಷದಿಂದ ಮಾತಾಡಿದ್ದಾರೆ ಎಂದರು. ಅವರು ಪಕ್ಷದಲ್ಲಿ ವಾನಪ್ರಸ್ಥದಲ್ಲಿದ್ದಾರೆ, ಮಂತ್ರಿಗಿರಿ ಸಿಗದ ಬೇಸರ ಅವರಲ್ಲಿದೆ, ಅವರ ವೈಯಕ್ತಿಕ ಹೇಳಿಕೆಗೆ ಮಹತ್ವವಿಲ್ಲ ಎಂದು ಹೇಳಿದರು.


ಪ್ರಧಾನಿ ಮೋದಿ ಚುನಾವಣಾ ಭಾಷಣಗಳಲ್ಲಿ ಸಿದ್ದರಾಮಯ್ಯ ವಿರುದ್ಧ ಅಪಾದನೆ ಮಾಡುವುದು ಏಳು ಕೋಟಿ ಕನ್ನಡಿಗರಿಗೆ ಮಾಡುವ ಅಪಮಾನ ಎಂದು ಕಿಡಿಕಾರಿದರು.
ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ಪ್ರಸಂಗ ಬರುವುದಿಲ್ಲ, ತನಿಖೆಯಲ್ಲಿ ಸಿದ್ದರಾಮಯ್ಯ ನಿರಪರಾಧಿ ಎಂದು ಸಾಬೀತಾಗಲಿದೆ ಎಂದರು.


ಬಿಜೆಪಿಯವರು ಕೇಶವಕೃಪಾದ ಆದೇಶದಂತೆ ನಡೆದುಕೊಳ್ಳುತ್ತಿದ್ದಾರೆ, ವಿಶ್ವಾಸಾರ್ಹತೆ ಇಲ್ಲದ ಜನರಿಂದ ಖಾಸಗಿ ದೂರು ದಾಖಲಿಸಿ ರಾಜ್ಯಪಾಲರ ಮೂಲಕ ಆಟ ಆಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.


ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ಮಹಿಳಾ ಕಾಂಗ್ರೆಸ್ ಜಿಲ್ಲಾದ್ಯಕ್ಷೆ ಶಾಲೆನ್ ಪಿಂಟೋ, ಎನ್ ಎಸ್ ಯು ಐ ಜಿಲ್ಲಾಧ್ಯಕ್ಷ ಸುಹಾನ್ ಆಳ್ವ ಸೇರಿದಂತೆ ಇತರರು ಉಪಸ್ಥಿತರಿದ್ದರು.



Join Whatsapp