ಬೆಂಗಳೂರು: ಮನೆ ಕೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿದೆ.
ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿದಾರರು ಸಲ್ಲಿಸಿರುವ ಜಾಮೀನು ಅರ್ಜಿ ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳ ತೀರ್ಪು ಒಟ್ಟಾಗಿ ಪ್ರಕಟಿಸುವುದಾಗಿ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಪ್ರಭುಲಿಂಗ ನಾವದಗಿ, ”ಅತ್ಯಾಚಾರ ನಡೆದ ಆರೋಪ 5 ವರ್ಷಗಳ ಹಿಂದೆ ನಡೆದಿರುವುದಾಗಿದೆ. ಅತ್ಯಾಚಾರ ನಡೆದಿದೆ ಎಂಬುದಾಗಿ ಆರೋಪಿಸಿದ್ದರೂ, ಅವರ ಮನೆಯಲ್ಲಿಯೇ ಕೆಲಸ ಮಾಡಿಕೊಂಡು ಉಳಿದುಕೊಂಡಿದ್ದರು” ಎಂದು ಪೀಠಕ್ಕೆ ತಿಳಿಸಿದರು.
ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೋ.ರವಿವರ್ಮ ಕುಮಾರ್, ”ಘಟನೆ ಭಯಾನಕವಾಗಿದೆ. ಅತ್ಯಾಚಾರಕ್ಕೊಳಗಾದ ಮಹಿಳೆಗೆ ಅರ್ಜಿದಾರ ಆರೋಪಿ ಘಟನೆ ಸಂಬಂಧ ಎಲ್ಲಿಯೂ ಚರ್ಚೆ ನಡೆಸಿದಲ್ಲಿ ಮತ್ತು ಇತರರಿಗೆ ಮಾಹಿತಿ ನೀಡಿದಲ್ಲಿ ವಿಡಿಯೋವನ್ನು ಸಂತ್ರಸ್ತೆಯ ಮಗನಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೇ, ಘಟನೆ ನಡೆದ ಸಂದರ್ಭದಲ್ಲಿ ಕಿರಿಯ ಮಗಳಿಗೆ ಮದುವೆ ಆಗಿರಲಿಲ್ಲ. ಹಿರಿಯ ಪುತ್ರಿಗೆ ಮಾತ್ರ ಮದುವೆಯಾಗಿತ್ತು. ಅವರ ಭವಿಷ್ಯಕ್ಕೆ ಸಮಸ್ಯೆ ಆಗಲಿದೆ ಎಂಬ ಕಾರಣದಿಂದ ದೂರು ನೀಡಿರಲ್ಲ. ಇದೀಗ ಎಲ್ಲರೂ ಅವರೊಂದಿಗೆ ಇದ್ದಾರೆ. ಹೀಗಾಗಿ, ದೂರು ದಾಖಲಿಸುವುದಕ್ಕೆ ವಿಳಂಬವಾಗಿದೆ” ಎಂದು ವಿವರಿಸಿದರು.