►ರಾಜ್ಯದಲ್ಲಿ ಭ್ರಷ್ಟಾಚಾರ ಆರೋಪ ಇಲ್ಲದ ಒಬ್ಬನೇ ಒಬ್ಬ ಬಿಜೆಪಿ ನಾಯಕನನ್ನು ತೋರಿಸಿದರೆ ಸನ್ಮಾನ
ಬೆಂಗಳೂರು: ಮುಡಾ ಪ್ರಕರಣದಲ್ಲಿ ತನಿಖೆಗೆ ಆದೇಶ ದೊರೆತ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಬಗ್ಗೆ ರ‍್ಯಾಲಿಯೊಂದರಲ್ಲಿ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿಗೆ ಇದೀಗ ಮುಖ್ಯಮಂತ್ರಿಗಳು ಎಕ್ಸ್ ಸಂದೇಶದ ಮೂಲಕ ತಿರುಗೇಟು ನೀಡಿದ್ದಾರೆ.
ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ ಎಂದು ಪ್ರಶ್ನಿಸಿರುವ ಸಿದ್ದರಾಮಯ್ಯ ಸರಣಿ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಎರಡುವರೆ ಸಾವಿರ ಕೋಟಿ ರೂಪಾಯಿಗಳಿಗೆ ಹರಾಜು ಹಾಕಿ ಹಣ ಪೀಕಿದ್ದಾರೆ ಎಂಬ ಆರೋಪವನ್ನು ಸ್ವಪಕ್ಷದ ನಾಯಕರಿಂದಲೇ ಎದುರಿಸುತ್ತಿರುವ ಪ್ರಧಾನಿ ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ತಮ್ಮ ಪಕ್ಷದ ಮುಖ್ಯಮಂತ್ರಿ ಹುದ್ದೆಯನ್ನು ಮಾರಾಟ ಮಾಡಲಾಗಿದೆ ಎಂದು ರಾಜ್ಯದ ಬಿಜೆಪಿ ಶಾಸಕರೊಬ್ಬರು ಬಹಿರಂಗವಾಗಿ ಆರೋಪಿಸಿದ್ದರೂ ಅವರ ಮೇಲೆ ಕ್ರಮ ಇಲ್ಲ. ದಿನ ಬೆಳಗಾದರೆ ಭ್ರಷ್ಟಾಚಾರದ ಆರೋಪದ ಕೆಸರೆರಚಾಟದಲ್ಲಿ ತೊಡಗಿರುವ ಬಿಜೆಪಿ ಶಾಸಕರ ವಿರುದ್ಧವೂ ಯಾವ ಕ್ರಮವೂ ಇಲ್ಲ. ನರೇಂದ್ರ ಮೋದಿ ಅವರೇ ಈ ಮೌನಕ್ಕೆ, ಈ ನಿಷ್ಕ್ರಿಯತೆಗೆ ಏನು ಕಾರಣ? ಈ ಭ್ರಷ್ಟಾಚಾರದಲ್ಲಿ ನೀವೂ ಭಾಗಿದಾರರೆಂದು ತಿಳಿದುಕೊಳ‍್ಳಬಹುದೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಹೊರಿಸಿ ಭಾಷಣ ಮಾಡುತ್ತಿರುವ ಪ್ರಧಾನಿ ಮೋದಿ ಅವರೇ, ಭ್ರಷ್ಟಾಚಾರದ ಆರೋಪದ ಕಳಂಕ ಮೆತ್ತಿಕೊಂಡಿಲ್ಲದ ಒಬ್ಬನೇ ಒಬ್ಬ ನಾಯಕನನ್ನು ಕರ್ನಾಟಕದ ಬಿಜೆಪಿಯಲ್ಲಿ ನೀವು ತೋರಿಸಿದರೆ ನಿಮ್ಮನ್ನು ಕರ್ನಾಟಕಕ್ಕೆ ಗೌರವದಿಂದ ಕರೆಸಿ ಸಾರ್ವಜನಿಕವಾಗಿ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತೇವೆ. ಗಣಿಗಾರಿಕೆಗೆ ಕಾನೂನುಬಾಹಿರವಾಗಿ ಭೂಮಿ ಮಂಜೂರು ಮಾಡಿರುವ, ನೂರಾರು ಕೋಟಿ ರೂಪಾಯಿ ಹಗರಣದ ಆರೋಪ ಎದುರಿಸುತ್ತಿರುವ ಕುಮಾರಸ್ವಾಮಿ ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಂಡಿರುವ ನಿಮಗೆ ಇತರರ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವಾಗ ಆತ್ಮಸಾಕ್ಷಿಯೂ ಚುಚ್ಚುವುದಿಲ್ಲವೇ? ಈ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ಕರ್ನಾಟಕದ ಲೋಕಾಯುಕ್ತರು ಕೋರಿರುವ ಅನುಮತಿ ಬಗ್ಗೆ ಘನತೆವೆತ್ತ ರಾಜ್ಯಪಾಲರು ಕಣ್ಣುಮುಚ್ಚಿಕೊಂಡಿರುವುದೇಕೇ? ಅವರ ಮೇಲೆ ಒತ್ತಡ ಹೇರುತ್ತಿರುವರು ಯಾರು ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.