ಬೆಂಗಳೂರು: ರಾಜ್ಯದಲ್ಲಿ ಫೆಲೆಸ್ತೀನ್ ದೇಶದ ಶೋಷಿತ ಸಮುದಾಯದ ಪರವಾಗಿ ಧ್ವನಿ ಎತ್ತುವುದು ಅವರ ಪರವಾಗಿ ನಿಲ್ಲುವುದು ಅಪರಾಧವೇ ಎಂದು ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಮ್ಮದೇ ಪಕ್ಷದ ಮುಖ್ಯಮಂತ್ರಿಗಳಾಗಿರುವ ಸಿದ್ದರಾಮಯ್ಯ ಅವರ ನೇತೃತ್ವದ ಕರ್ನಾಟಕ ಸರ್ಕಾರದ ಆಡಳಿತದಲ್ಲಿ ಫೆಲಸ್ತೀನ್ ದೇಶದ ಶೋಷಿತ ಸಮುದಾಯದ ಪರವಾಗಿ ಧ್ವನಿ ಎತ್ತುವುದು ಅವರ ಪರವಾಗಿ ನಿಲ್ಲುವುದು ಅಪರಾಧವೇ..?
ಜಾಗತಿಕ ಮಟ್ಟದಲ್ಲಿ ಭಾರತ ದೇಶವು ಸದಾ ಮಾನವ ಹಕ್ಕುಗಳ ಪರ ಧ್ವನಿ ಎತ್ತಿದ ಇತಿಹಾಸ ಮತ್ತು ಸಂಪ್ರದಾಯ ಹೊಂದಿದೆ. ಜಗತ್ತಿನಲ್ಲಿ ಎಲ್ಲೇ ಅನ್ಯಾಯ ನಡೆದರು ಅದರ ವಿರುದ್ಧ ಮಾತನಾಡಲು ಮತ್ತು ಮರ್ದಿತರ ಪರ ಬೆಂಬಲವಾಗಿ ನಿಲ್ಲಲು ಸಂವಿಧಾನದ 19 ನೇ ವಿಧಿ ಅನುಮತಿಸುತ್ತದೆ ಅದಲ್ಲದೇ ಇದು ದೇಶದ ಪ್ರತಿಯೊಬ್ಬ ನಾಗರೀಕನ ಹಕ್ಕಾಗಿದೆ. ಗಾಝದಲ್ಲಿ ಇಸ್ರೇಲ್ ನಡೆಸುತ್ತಿರುವ ದೌರ್ಜನ್ಯ, ದಬ್ಬಾಳಿಕೆ, ಮಾರಣಹೋಮ, ಜನಾಂಗಿಯ ದ್ವೇಷದ ವಿರುದ್ಧ ಮಾತನಾಡುವುದು ರಾಷ್ಟಪಿತ ಮಹಾತ್ಮಾ ಗಾಂಧೀಜಿಯವರ ನಡೆಯಾಗಿತ್ತು. ಐತಿಹಾಸಿಕವಾಗಿ ದೇಶದ ಪ್ರಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರು ಯಿಂದ ಹಿಡಿದು ಪ್ರಸ್ತುತ ಮೋದಿವರೆಗೂ ಪ್ರತಿಯೊಬ್ಬರ ಅಧಿಕಾರವಧಿಯಲ್ಲಿ ಭಾರತದ ರಾಜತಾಂತ್ರಿಕ ನೀತಿ ಪ್ಯಾಲೇಸ್ತೀನ್ ನಾಗರಿಕರ ಹಕ್ಕುಗಳ ಬಗ್ಗೆ ಪ್ರತಿಧ್ವನಿಸಿದ್ದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ. ಅದಲ್ಲದೇ ಮಾನವ ಹಕ್ಕುಗಳ ಹೋರಾಟಗಾರ ಜಗತ್ಪ್ರಸಿದ್ಧ ನೆಲ್ಸಲ್ ಮಂಡೇಲಾ ಸಹ ಪ್ಯಾಲೇಸ್ತೀನ್ ಜನರಿಗೆ ಸ್ವಾತಂತ್ರ ಸಿಗದೆ ನಮ್ಮೆಲ್ಲರ ಸ್ವಾತಂತ್ರ ಅಪೂರ್ಣವಾಗಿದೆ ಎಂದು ಹೇಳಿದ್ದರು. ಹೀಗೆ ಜಾಗತಿಕವಾಗಿ ಮಾನವ ಹಕ್ಕುಗಳ ಪರ ಮಾತನಾಡುವುದು, ಬೆಂಬಲಿಸುವುದು ಸಭ್ಯ ಸಮಾಜದ ಗುರುತಾಗಿದೆ. ಹೀಗಿರುವಾಗ ಪ್ಯಾಲೇಸ್ತೀನ್ ಜನರ ಪರ ಧ್ವನಿಯಾಗುವ ನಿಟ್ಟಿನಲ್ಲಿ ಕೇವಲ ಪ್ಯಾಲೇಸ್ತೀನ್ ಬಾವುಟ ಪ್ರದರ್ಶಿಸಿದಕ್ಕೆರಾಜ್ಯದ ವಿವಿಧ ಕಡೆಗಳಲ್ಲಿ ದಾಖಲಾಗಿರುವ ಪ್ರಕರಣಗಳು ಅನ್ಯಾಯದ ಪ್ರತೀಕ ಮತ್ತು ಸಂವಿಧಾನದ ಆಶಯಕ್ಕೆ ಸವಾಲಾಗಿದೆ. ಆದುದರಿಂದ ರಾಜ್ಯದಲ್ಲಿ ದಾಖಲಾದ ಸುಳ್ಳು ಪ್ರಕರಣಗಳನ್ನು ರದ್ದುಗೊಳಿಸಿ, ದುರುದ್ದೇಶಪೂರಿತವಾಗಿ ಪ್ರಕರಣ ದಾಖಲಿಸಿರುವ ಕೆಲವು ಸಂಘೀ ಮನಸ್ಥಿತಿಯ ಪೋಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿ ಅಮಾಯಕರಿಗೆ ನ್ಯಾಯ ಕಲ್ಪಿಸಿ ಕೊಡ ಬೇಕಾಗಿ ಈ ಮೂಲಕ ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.