ಕಲ್ಪಿತ ‘ಲವ್ ಜಿಹಾದ್’ ಕಾನೂನು : ಗುಜರಾತ್ ನಲ್ಲಿ ಹಿಂದೂ ಕುಟುಂಬದ ವಿರುದ್ಧವೇ ದೂರು ದಾಖಲು !

Prasthutha|

►ಕಾನೂನಿನ ತಾರತಮ್ಯ ನೀತಿಯನ್ನು ಜನರೆದುರು ಎತ್ತಿ ತೋರಿಸುತ್ತೇನೆ ಎಂದ ಅರ್ಬಾಝ್ ಪಠಾಣ್ !

- Advertisement -

ವಡೋದರ : ಗುಜರಾತ್ ನಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ, 2003ಕ್ಕೆ ತಿದ್ದುಪಡಿ ತರಲು ವಿಧಾನಸಭೆಯಲ್ಲಿ ಮಸೂದೆ ಅಂಗೀಕರಿಸಿದ ಕೇವಲ ನಾಲ್ಕು ದಿನಗಳ ಬಳಿಕ, ತನ್ನ ಸಹೋದರಿಯನ್ನು ಹಲವು ಆಮಿಷಗಳ ಮೂಲಕ ಮತಾಂತರಿಸಿ ಮದುವೆಯಾದ ಹಿಂದೂ ಕುಟುಂಬವೊಂದರ ವಿರುದ್ಧ  ವಡೋದರದ ಮುಸ್ಲಿಮ್ ಯುವಕನೋರ್ವ ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ. ಇದು ಇನ್ನೂ ಕಾನೂನಾಗಿ ಅನುಮೋದನೆಗೊಂಡಿಲ್ಲವಾದರೂ, ಸದನದಲ್ಲಿ  ಗುಜರಾತ್ ಗೃಹ ಖಾತೆ ಸಹಾಯಕ ಸಚಿವ ಪ್ರದೀಪಸಿಂಗ್ ಜಡೇಜಾ ಅವರು ” ಇದು ಲವ್ ಜಿಹಾದ್” ಅನ್ನು ನಿಗ್ರಹಿಸುವ ಮಸೂದೆ ಎಂದು ಬಣ್ಣಿಸಿದ್ದು ಇಲ್ಲಿ ಉಲ್ಲೇಖಾರ್ಹ.

ಕಲ್ಪೇಶ್ ಚೌಹಾಣ್ ಮತ್ತು ಅವರ ಕುಟುಂಬದ ಹಲವು ಸದಸ್ಯರ ವಿರುದ್ಧ ಅರ್ಬಾಝ್ ಖಾನ್ ಪಠಾಣ್ ಅವರು ವಡೋದರಾದ ಜೆ.ಪಿ.ರಸ್ತೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ತನ್ನ 29 ವರ್ಷದ ಸಹೋದರಿಗೆ “ಉತ್ತಮ ಜೀವನಶೈಲಿ”, “ಆರ್ಥಿಕ ಸಮೃದ್ಧಿ” ದೈವಿಕ ಆಶೀರ್ವಾದಗಳು ಮುಂತಾದ ಆಸೆಗಳನ್ನು ತೋರಿಸಿ “ಧಾರ್ಮಿಕ ಮತಾಂತರ”ದ ಉದ್ದೇಶಕ್ಕಾಗಿ ಮದುವೆಯ “ಆಮಿಷ” ಒಡ್ಡಲಾಗಿದೆ ಎಂದು ಸ್ಥಳೀಯ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಪಠಾಣ್ ಆರೋಪಿಸಿದ್ದಾರೆ. ಹೊಸದಾಗಿ ಪರಿಚಯಿಸಲಾದ ಗುಜರಾತ್ ಫ್ರೀಡಂ ಆಫ್ ರಿಲಿಜನ್ (ತಿದ್ದುಪಡಿ) ಮಸೂದೆ, 2021 ರ ಅಡಿಯಲ್ಲಿ ಆರೋಪಿಯ ವಿರುದ್ಧ ಪೊಲೀಸ್ ಕ್ರಮ ತೆಗೆದುಕೊಳ್ಳುವಂತೆ ಅವರು ಕೋರಿದ್ದಾರೆ.

- Advertisement -

“ಇದು ಇನ್ನೂ ಕಾನೂನಾಗಿಲ್ಲ ಮತ್ತು ಪೊಲೀಸರು ಎಫ್ ಐಆರ್ ದಾಖಲಿಸುವುದಿಲ್ಲ ಎಂದೂ ನಮಗೆ ತಿಳಿದಿದೆ. ಆದರೆ, ಪ್ರಸ್ತುತ ಸರ್ಕಾರವು ಇಂತಹಾ ಅಂತರ್ಧರ್ಮೀಯ ಮದುವೆಗಳನ್ನು ‘ಲವ್ ಜಿಹಾದ್’ ಎಂದು ಬಿಂಬಿಸಲು ಪ್ರಯತ್ನಿಸುತ್ತಿದೆ. ಅವುಗಳನ್ನು ನಾವು ಜನರ ಮುಂದೆ ಎತ್ತಿ ತೋರಿಸಲು ಪ್ರಯತ್ನಿಸುತ್ತಿದ್ದೇವೆ.  ಈಗ ಮುಸ್ಲಿಂ ಹುಡುಗಿಯನ್ನು ಮದುವೆಯಾದ ಹಿಂದೂ ಕುಟುಂಬದ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆಯೇ? ಉದ್ದೇಶಿತ ಕಾನೂನು ಅಂತಹ ಅಂತರ್ಧರ್ಮೀಯ ವಿವಾಹಗಳಲ್ಲಿನ ಪ್ರತಿಯೊಬ್ಬರಿಗೂ ಎಫ್ ಐಆರ್ ದಾಖಲಿಸಲು ಅಧಿಕಾರ ನೀಡುತ್ತದೆ. ಆದರೆ ಅದರಲ್ಲಿನ ತಾರತಮ್ಯ ನೀತಿಯನ್ನು ನಾವು ವಿರೋಧಿಸುತ್ತೇವೆ” ಎಂದು ಅರ್ಬಾಝ್ ಕುಟುಂಬದ ಮೂಲಗಳು ತಿಳಿಸಿವೆ. ಆದರೆ ಮದುವೆಯಾದ ದಂಪತಿಗಳು ಈ ಆರೋಪಗಳನ್ನು ನಿರಾಕರಿಸಿದ್ದಾರೆ.

ಎಪ್ರಿಲ್ 1ರಂದು ಗೃಹ ಖಾತೆ ಸಹಾಯಕ ಸಚಿವ ಪ್ರದೀಪಸಿಂಗ್ ಜಡೇಜಾ ಅವರು ವಿಧಾನಸಭೆಯಲ್ಲಿ ಈ ವಿವಾದಾತ್ಮಕ ಮಸೂದೆಯನ್ನು ಮಂಡಿಸಿದ್ದರು. ವಿರೋಧ ಪಕ್ಷ ಕಾಂಗ್ರೆಸ್ ಪ್ರತಿಭಟನೆಯ ನಡುವೆ ಇದನ್ನು ಅಂಗೀಕರಿಸಲಾಯಿತು. ಮಸೂದೆಯು ತನ್ನ ಭಾಷೆಯಲ್ಲಿ ಎಲ್ಲಿಯೂ “ಲವ್ ಜಿಹಾದ್” ಅನ್ನು ಉಲ್ಲೇಖಿಸದಿದ್ದರೂ, ಚರ್ಚೆಯ ಸಮಯದಲ್ಲಿ ಜಡೇಜಾ ಗುಜರಾತ್ ಫ್ರೀಡಂ ಆಫ್ ರಿಲಿಜನ್ (ತಿದ್ದುಪಡಿ) ಮಸೂದೆ, 2021 ಅನ್ನು “ಕುತಂತ್ರ” ಅಥವಾ “ಆಕರ್ಷಣೆಗಳಿಂದ” ಮಾಡಲಾದ “ಲವ್ ಜಿಹಾದ್” ಅಥವಾ ಅಂತರ್ಧರ್ಮೀಯ ವಿವಾಹವನ್ನು ನಿಲ್ಲಿಸುವ ಮಸೂದೆ ಎಂದು ಶ್ಲಾಘಿಸಿದ್ದರು.  ಈ ಮಸೂದೆಯಲ್ಲಿ ವ್ಯಕ್ತಿಗಳಿಗೆ 3 ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದ್ದರೆ, ಸಂತ್ರಸ್ತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾದರೆ ಅಥವಾ ಅಪ್ರಾಪ್ತರಾದರೆ 4 ರಿಂದ 7 ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.

ಈ ಪ್ರಸ್ತಾಪವು ಧಾರ್ಮಿಕ ಮತಾಂತರದಲ್ಲಿ ತೊಡಗಿರುವ ಸಂಸ್ಥೆಗಳನ್ನು ಕೂಡಾ ಗುರಿಯಾಗಿಸಿಕೊಂಡಿದೆ. ಅಂತಹ ಪ್ರಕರಣಗಳಲ್ಲಿ ಗರಿಷ್ಠ ಶಿಕ್ಷೆ 10 ವರ್ಷಗಳವರೆಗೆ ಮತ್ತು ಭಾಗಿಯಾಗಿರುವ ಸಂಸ್ಥೆಗಳ ಪ್ರತಿಯೊಬ್ಬ ಸದಸ್ಯರಿಗೆ 5 ಲಕ್ಷ ರೂ.ಗಳ ದಂಡ ವಿಧಿಸಲಾಗುತ್ತದೆ ಎಂದು ಕರಡು ಮಸೂದೆ ಹೇಳಿದೆ. ಮಸೂದೆಯಲ್ಲಿ “ಉತ್ತಮ ಜೀವನ ಶೈಲಿ, ದೈವಿಕ ಆಶೀರ್ವಾದಗಳು ಅಥವಾ ಬೇರೆ ರೀತಿಯಲ್ಲಿ” “ಆಕರ್ಷಣೆಗಳು” ಎಂಬುವುದನ್ನು ವ್ಯಾಖ್ಯಾನಿಸಲಾಗಿದೆ. ಈ ಮಸೂದೆಯು ಸಂತ್ರಸ್ತೆಯ ಯಾವುದೇ ರಕ್ತಸಂಬಂಧಿಗೆ ದೂರು ನೀಡಿ ಎಫ್ ಐ ಆರ್ ದಾಖಲಾಗಿಸುವ ಅಧಿಕಾರವನ್ನು ನೀಡಿದೆ.



Join Whatsapp