ಭೀಕರ ಬರಗಾಲ ಎದುರಿಸುತ್ತಿರುವ ಜಿಂಬಾಬ್ವೆಯಲ್ಲಿ ಜನರಿಗೆ ಆಹಾರ ಒದಗಿಸುವುದು ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅಲ್ಲಿನ ಅಧಿಕಾರಿಗಳೇ ನಿರ್ಧರಿಸಿದ್ದಾರೆ.
1.63 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ಜಿಂಬಾಬ್ವೆ ದೇಶದಲ್ಲಿ ಅರ್ಧದಷ್ಟು ಜನ ಹಸಿವಿನಿಂದ ಬಳಲುತ್ತಿದ್ದಾರೆ. ಅವರ ಹಸಿವನ್ನು ನೀಗಿಸುವ ಉದ್ದೇಶದಿಂದ 200 ಆನೆಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.
ಜೊತೆಗೆ 55,000 ಆನೆಗಳಿಗೆ ಆಶ್ರಯ ಒದಗಿಸಬಲ್ಲ ನಮ್ಮ ದೇಶದಲ್ಲಿ ಪಸ್ತುತ 84,000 ಆನೆಗಳಿದ್ದು, ಆನೆಗಳ ಸಂಖ್ಯೆಯಲ್ಲಿ ಜಿಂಬಾಬ್ವೆ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ ಎನ್ನುವ ಮೂಲಕ ಆನೆ ಹತ್ಯೆ ಸಮರ್ಥಿಸಿಕೊಂಡಿದ್ದಾರೆ. ಈ ನಡುವೆ ಆನೆಗಳನ್ನು ಕೊಂದು ಅವುಗಳ ಮಾಂಸವನ್ನು ಒಣಗಿಸಿ ಪ್ರೋಟೀನ್ ಅವಶ್ಯಕತೆ ಇರುವವರಿಗೆ ಕೊಡುವ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಜಿಂಬಾಬ್ವೆ ಪರಿಸರ ಸಚಿವ ಸಿತೆಂಬಿಸೋ ನಿಯೋನಿ ಹೇಳಿದ್ದಾರೆ ಎಂದೂ ಸಹ ವರದಿಯಾಗಿತ್ತು.
ಕೆಲ ದಿನಗಳ ಹಿಂದೆಯಷ್ಟೇ ನಮೀಬಿಯಾ ಸರ್ಕಾರವೂ ಪ್ರಾಣಿಗಳನ್ನು ಕೊಲ್ಲುವ ನಿರ್ಧಾರ ತೆಗೆದುಕೊಂಡಿದೆ. ಬರದಿಂದ ತತ್ತರಿಸಿರುವ ನಮೀಬಿಯಾ ಜನರಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ 83 ಆನೆಗಳು ಸೇರಿದಂತೆ 723 ಕಾಡು ಪ್ರಾಣಿಗಳನ್ನು ಕೊಲ್ಲುವ ಯೋಜನೆಯನ್ನು ರೂಪಿಸಿದೆ. ತೀವ್ರ ಬರಗಾಲದಿಂದ ಆಹಾರಕ್ಕಾಗಿ ಹೆಣಗಾಡುತ್ತಿರುವವರಿಗೆ ಮಾಂಸವನ್ನು ವಿತರಿಸುವುದಾಗಿ ಸರ್ಕಾರ ಇತ್ತೀಚೆಗೆ ಹೇಳಿತ್ತು.