ಹಿಜ್ಬುಲ್ಲಾ ಸದಸ್ಯರು ಬಳಸುತ್ತಿದ್ದ ಪೇಜರ್‌ಗಳು ದಿಢೀರ್ ಸ್ಫೋಟ: ಕನಿಷ್ಠ 8 ಮೃತ, ಸಾವಿರಾರು ಮಂದಿ ಗಾಯ

Prasthutha|

ಬೈರೂತ್‌: ಲೆಬನಾನ್‌ನ ಹಿಜ್ಬುಲ್ಲಾ ಹೋರಾಟಗಾರು ಸಂವಹನ ಮಾಡಲು ಬಳಸುತ್ತಿದ್ದ ಪೇಜರ್‌ಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡು 8 ಮಂದಿ ಮೃತಪಟ್ಟಿದ್ದು, ಸಾವಿರಾರು ಮಂದಿ ಗಾಯಗೊಂಡ ಘಟನೆ ವರದಿಯಾಗಿದೆ.

- Advertisement -

ಸಂವಹನ ಮಾಡಲು ಬಳಸುತ್ತಿದ್ದ ಪೇಜರ್‌ಗಳು ಇದ್ದಕ್ಕಿದ್ದಂತೆ ಸ್ಫೋಟಗೊಂಡಿವೆ. ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧವು ಭುಗಿಲೆದ್ದ ನಂತರ ನಡೆದ ಅತಿದೊಡ್ಡ ‘ಭದ್ರತಾ ಉಲ್ಲಂಘನೆ’ ಇದಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿಯಾಗಿದೆ.

ಪೇಜರ್‌ಗಳು ಸ್ಫೋಟಗೊಂಡು 8 ಮಂದಿ ಸಾವನ್ನಪ್ಪಿ 2,800 ಕ್ಕೂ ಹೆಚ್ಚಿನ ಹಿಜ್ಬುಲ್ಲಾ ಸದಸ್ಯರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದ ಲೆಬನಾನ್‌ನ ಆರೋಗ್ಯ ಸಚಿವರು ಈ ಘಟನೆಯನ್ನು ದೃಢಪಡಿಸಿದ್ದಾರೆ ಎಂದು ವರದಿಗಳು ಹೇಳಿವೆ.

- Advertisement -

ಅತ್ಯಾಧುನಿಕ ತಂತ್ರಜ್ಞಾನ ಮೂಲಕ ಹಿಜ್ಬುಲ್ಲಾ ಹೋರಾಟಗಾರು ಬಳಸುತ್ತಿದ್ದ ಪೇಜರ್‌ಗಳನ್ನು ಸ್ಫೋಟಿಸಲಾಗಿದೆ ಎಂದು ಊಹಿಸಲಾಗಿದೆ.

“ಈ ಕ್ರಿಮಿನಲ್‌ ಕೃತ್ಯಕ್ಕೆ ನಮ್ಮ ಶತ್ರು ಇಸ್ರೇಲ್‌ಅನ್ನು ಸಂಪೂರ್ಣ ಹೊಣೆಗಾರರನ್ನಾಗಿ ಮಾಡುತ್ತೇವೆ. ಈ ಪಾಪದ ಕೆಲಸಕ್ಕೆ ಅವರು ತಕ್ಕ ಶಿಕ್ಷೆ ಅನುಭವಿಸಲಿದ್ದಾರೆ” ಎಂದು ಹಿಜ್ಬುಲ್ಲಾ ಪ್ರಕಟಣೆಯಲ್ಲಿ ತಿಳಿಸಿದೆ.

“ಈ ಘಟನೆಯು ಇಸ್ರೇಲ್‌ ನಡೆಸಿದ ಭಯೋತ್ಪಾದನಾ ಕೃತ್ಯ” ಎಂದು ಪ್ಯಾಲೆಸ್ತೀನ್ ಸಂಘಟನೆ ಹಮಾಸ್‌ ಹೇಳಿದೆ.

ಲೆಬನಾನ್‌ನಲ್ಲಿರುವ ಇರಾನ್ ರಾಯಭಾರ ಕಚೇರಿ ಧ್ವಂಸವಾಗಿದ್ದು, ಇರಾನ್ ರಾಯಭಾರಿ ಗಾಯಗೊಂಡಿದ್ದಾರೆ ಎಂದು ಇರಾನ್‌ನ ಮೆಹರ್ ಸುದ್ದಿ ಸಂಸ್ಥೆ ತಿಳಿಸಿದೆ ಎಂದು ವರದಿಯಾಗಿದೆ.

‘ಈ ಕೃತ್ಯದ ಹಿಂದೆ ಇಸ್ರೇಲ್‌ ಕೈವಾಡ ಇದೆ. ಅತ್ಯಾಧುನಿಕ ರಿಮೋಟ್‌ ತಂತ್ರಜ್ಞಾನ ಬಳಸಿ, ಸ್ಫೋಟ ನಡೆಸಲಾಗಿದೆ” ಎಂದು ಲೆಬನಾನ್‌ ಸರ್ಕಾರದ ಅಧಿಕಾರಿಗಳು ಆರೋಪಿಸಿದ್ದಾರೆ.

ಲೆಬನಾನ್‌ ಪ್ರಧಾನಿ ಹೇಳಿಕೆ ನೀಡಿದ್ದು, “ಇಸ್ರೇಲ್‌ ನಡೆಸಿದ ಈ ಕ್ರಿಮಿನಲ್‌ ಆಕ್ರಮಣವು, ಲೆಬನಾನ್‌ನ ಸಾರ್ವಭೌಮತೆಯ ಉಲ್ಲಂಘನೆ” ಎಂದು ಟೀಕಿಸಿದ್ದಾರೆ ಎಂದು ವರದಿಯಾಗಿದೆ.

ಮೃತರಲ್ಲಿ ಒಬ್ಬ ಬಾಲಕಿ ಸೇರಿದ್ದಾಳೆ. ಗಾಯಗೊಂಡವರ ಪೈಕಿ 200 ಜನರ ಸ್ಥಿತಿ ಗಂಭೀರವಾಗಿದೆ ಎಂದು ಲೆಬನಾನ್ ಆರೋಗ್ಯ ಸಚಿವರು ಹೇಳಿದ್ದಾರೆ.

ಮೊಬೈಲ್‌ ಫೋನ್‌ಗಳು ಬರುವ ಮುನ್ನ ಪೇಜರ್‌ಅನ್ನು ಸಂವಹನ ಸಾಧನವಾಗಿ ಬಳಸಲಾಗುತ್ತಿತ್ತು. ಆದರೆ ಹಿಜ್ಬುಲ್ಲಾ ಹೋರಾಟಗಾರರು ಪರಸ್ಪರ ಸಂವಹನ ನಡೆಸಲು ಈಗಲೂ ಪೇಜರ್‌ಅನ್ನೇ ಬಳಸುತ್ತಿದ್ದಾರೆ.

ಸ್ಫೋಟಗಳ ಬಗ್ಗೆ ಪ್ರತಿಕ್ರಿಯಿಸಲು ಇಸ್ರೇಲ್ ನಿರಾಕರಿಸಿದೆ.



Join Whatsapp