ಕೋಲ್ಕತ್ತಾ: ಆರ್ ಜಿ ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ-ಹತ್ಯೆ ಪ್ರಕರಣ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರು ಮತ್ತು ಸಿಎಂ ಜೊತೆಗಿನ ಸಭೆ ಕೊನೆಗೂ ನಡೆದಿದೆ. ಸತತ 2 ಗಂಟೆಗಳ ಕಾಲ ಈ ಸಭೆ ನಡೆದಿದ್ದು, 30 ವೈದ್ಯರ ನಿಯೋಗ ಸಿಎಂ ಮಮತಾ ಬ್ಯಾನರ್ಜಿ ಅವರ ಕಾಳಿಘಾಟ್‌ನಲ್ಲಿರುವ ನಿವಾಸದಲ್ಲಿ ಸಭೆ ನಡೆದಿದೆ.
ಮುಖ್ಯ ಕಾರ್ಯದರ್ಶಿ ಮನೋಜ್ ಪಂಥ್ ಅವರು ಆಹ್ವಾನವನ್ನು ಕಳುಹಿಸಿ, ಸಭೆಯ ನಡಾವಳಿಗೆ ಎರಡೂ ಪಕ್ಷಗಳಿಂದ ಸಹಿ ಮಾಡಲಾಗುವುದು ಮತ್ತು ಪ್ರತಿಗಳನ್ನು ಕೊನೆಯಲ್ಲಿ ಪ್ರತಿಯೊಬ್ಬರಿಗೂ ನೀಡಲಾಗುವುದು ಎಂದು ವೈದ್ಯರಿಗೆ ಭರವಸೆ ನೀಡಿದ್ದರು. ನಿಗದಿಗಿಂತ ಎರಡು ತಾಸು ತಡವಾಗಿ ಆರಂಭವಾದ ಸಭೆ ಎರಡು ತಾಸುಗಳಷ್ಟು ಹೊತ್ತು ನಡೆದಿದೆ.
ಸಭೆಯ ನೇರ ಪ್ರಸಾರ ಮತ್ತು ವೀಡಿಯೊ ರೆಕಾರ್ಡಿಂಗ್‌ಗಾಗಿ ವೈದ್ಯರ ಬೇಡಿಕೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದ ಕಾರಣ ಹಿಂದೆ ಇಂತಹ ಸಭೆ ನಡೆಸುವ ಪ್ರಯತ್ನಗಳಲ್ಲಿ ಹಿನ್ನಡೆಯುಂಟಾಗಿತ್ತು. ಬಳಿಕ ರಾಜಿ ನಡೆದು ವೈದ್ಯರ ನಿಯೋಗ ಸಭೆಯ ವಿವರಗಳನ್ನು ದಾಖಲಿಸಲು ಮತ್ತು ಸಹಿ ಮಾಡಿದ ಪ್ರತಿಯನ್ನು ಸ್ವೀಕರಿಸಲು ಮಾತ್ರ ಷರತ್ತು ವಿಧಿಸಿದ್ದರು.
ದೇಶದ ಕಾನೂನು ಪಾಲಿಸುವ ನಾಗರಿಕರಾಗಿ, ನಾವು ಸಭೆಗೆ ಹಾಜರಾಗಲು ಸಿದ್ಧರಿದ್ದೇವೆ. ಆದರೆ ಸಭೆಯ ಸ್ಥಳವು ಆಡಳಿತಕ್ಕೆ ಸಂಬಂಧಿಸಿದ ವಿಷಯವಾಗಿರುವುದರಿಂದ ಸಭೆಯ ಸ್ಥಳವು ಅಧಿಕೃತ ಮತ್ತು ಆಡಳಿತಾತ್ಮಕ ಸ್ಥಳವಾಗಿದ್ದರೆ ಅದು ನಿಜವಾಗಿಯೂ ಪ್ರಶಂಸನೀಯವಾಗಿದೆ ಎಂದು ವೈದ್ಯರು ತಿಳಿಸಿದ್ದರು.