ದೆಹಲಿ: ಇಪ್ಪತ್ತೆರಡು ಭದ್ರತಾ ಸಿಬ್ಬಂದಿಯ ಸಾವಿಗೆ ಕಾರಣವಾದ ಛತ್ತೀಸ್‌ಗಡದ ನಕ್ಸಲ್ ಕಾರ್ಯಾಚರಣೆ ಅಸಮರ್ಥವಾಗಿದ್ದು, ಕಾರ್ಯಾಚರಣೆಯ ರೂಪುರೇಷೆಯೂ ಸಮರ್ಪಕವಾಗಿರಲಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದು, ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ನಮ್ಮ ಯೋಧರು ಎಂದೂ ಬಂದೂಕುಗಳಿಗೆ ಆಹಾರವಾಗಿ ಸ್ವ ಇಚ್ಛೆಯಿಂದ ಹುತಾತ್ಮರಾಗುವಂತಹ ಮನಸ್ಥಿತಿಯುಳ್ಳವರಲ್ಲ‘ ಎಂದು ಹೇಳಿದ್ದಾರೆ.
‘ಕಾರ್ಯಾಚರಣೆಯಲ್ಲಿ ಗುಪ್ತದಳದ ವೈಫಲ್ಯವಿಲ್ಲ. ಘಟನೆಯಲ್ಲಿ ಯೋಧರು ಹುತಾತ್ಮರಾಗಿರುವಷ್ಟೇ ಮಾವೊವಾದಿ ಉಗ್ರರರೂ ಸತ್ತಿದ್ದಾರೆ‘ ಎಂದು ಸಿಆರ್‌ಪಿಎಫ್ ಮಹಾನಿರ್ದೇಶಕ ಕುಲದೀಪ್ ಸಿಂಗ್ ಅವರ ಹೇಳಿಕೆಯನ್ನು ಮಾಧ್ಯಮಗಳು ವರದಿ ಮಾಡಿದ್ದವು. ಆ ಹೇಳಿಕೆ ಉಲ್ಲೇಖಿಸಿದ ರಾಹುಲ್ ಗಾಂಧಿ, ‘ಗುಪ್ತದಳ ವೈಫಲ್ಯವಿಲ್ಲ, ಸತ್ತವರ ಪ್ರಮಾಣ 1:1 ಅನುಪಾತದಂತಿದೆ ಎಂದಾದರೆ ಈ ಕಾರ್ಯಾಚರಣೆಯನ್ನು ಸರಿಯಾಗಿ ರೂಪಿಸಿಲ್ಲ, ಇದೊಂದು ಅಸಮರ್ಥ ಕಾರ್ಯಾಚರಣೆ ಎಂದು ಅರ್ಥವಲ್ಲವೇ‘ ಎಂದು ಪ್ರಶ್ನಿಸಿದ್ದಾರೆ.
ಛತ್ತೀಸ್‌ಗಡದ ಸುಕ್ಮಾ ಮತ್ತು ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಸಿಬ್ಬಂದಿ ಮತ್ತು ಯೋಧರ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಸಿಆರ್‌ಪಿಎಫ್‌ನ ಯೋಧರು ಹುತಾತ್ಮರಾಗಿದ್ದರು. ಘಟನೆಯಲ್ಲಿ 31 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರು. ಸಿಆರ್‌ಪಿಎಫ್ ಅಧಿಕಾರಿಯೊಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.