ಶೀಘ್ರದಲ್ಲೇ ಎತ್ತಿನಹೊಳೆ ಯೋಜನೆ ಉದ್ಘಾಟನೆಗೆ ದಿನಾಂಕ ನಿಗದಿ: ಡಿ.ಕೆ ಶಿವಕುಮಾರ್

Prasthutha|

ಹಾಸನ: ಎತ್ತಿನಹೊಳೆ ಯೋಜನೆಯ ಟ್ರಯಲ್ ರನ್ ಪ್ರಾರಂಭ ಮಾಡಿದ್ದೇವೆ. ಯೋಜನೆಗಾಗಿ ಎಂಜಿನಿಯರ್‌ಗಳು ಸೇರಿದಂತೆ ಪ್ರತಿಯೊಬ್ಬ ನೌಕರನು ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ. ಈಗ 550 ಕ್ಯುಸೆಕ್ ನೀರು ಹರಿಯುತ್ತಿದೆ. ಇದರ ಆರು ಪಟ್ಟು ನೀರು ಉದ್ಘಾಟನೆ ದಿನ ಹರಿಸುತ್ತೇವೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

- Advertisement -

ಸಕಲೇಶಪುರದ ಹೆಬ್ಬನಹಳ್ಳಿಯಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಗೆ ಬಹಳ ಜನ ಭೂಮಿ ಕೊಟ್ಟಿದ್ದಾರೆ. ಇದು ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾಗಿದ್ದು, ಇದನ್ನು ಜನರಿಗೆ ಅರ್ಪಣೆ ಮಾಡುತ್ತೇವೆ. ಉದ್ಘಾಟನೆ ದಿನ ಸರಿಯಾದ ವ್ಯವಸ್ಥೆ ಮಾಡಿಕೊಂಡು ಸಾವಿರಾರು ಜನ ಸೇರುವಂತಹ ಐತಿಹಾಸಿಕ ಕಾರ್ಯಕ್ರಮ ಮಾಡುತ್ತೇವೆ. ಈಗ ಯೋಜನೆ ಪೂರ್ಣಗೊಳ್ಳಲು ಸ್ವಲ್ಪ ತೊಡಕಿದೆ ಹಾಗಾಗಿ ವಾಣಿವಿಲಾಸ ಸಾಗರ ಹಾಗೂ ಕೆರೆಗಳನ್ನು ತುಂಬಿಸಿಕೊಳ್ಳಲು ನೀರು ಹರಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದ ಜನತೆಗೆ ನಾವು ಮಾತು ಕೊಟ್ಟಿದ್ದೆವು, ಈಗ ನುಡಿದಂತೆ ನಡೆದಿದ್ದೇವೆ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಟೀಕೆಗಳು ಸಾಯ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ. ಈಗ ಟೀಕೆಗಳು ಸತ್ತು ಹೋಗಿವೆ. ಕೆಲಸ ಮಾತ್ರ ಉಳಿದಿದೆ. ಇನ್ನೂ 10 ದಿನಗಳಲ್ಲಿ ಉದ್ಘಾಟನೆಗೆ ಸಿಎಂ ಬಳಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.



Join Whatsapp