ಮುಖ್ಯಮಂತ್ರಿಯ ಪರಮಾಧಿಕಾರವನ್ನು ನಾವು ಯಾರೂ ಪ್ರಶ್ನಿಸಬಾರದು : ಕಾರಜೋಳ

Prasthutha|

ಬೆಳಗಾವಿ : ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವುದಕ್ಕೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಮುಖ್ಯಮಂತ್ರಿಗೆ ಇರುವ ಪರಮಾಧಿಕಾರವನ್ನು ನಾವ್ಯಾರೂ ಪ್ರಶ್ನಿಸಬಾರದು, ಅದು ಸೌಜನ್ಯವೂ ಅಲ್ಲ. ಸಚಿವ ಸಂಪುಟದ ಸದಸ್ಯರು, ಶಾಸಕರು, ಸಂಸದರು ಅಥವಾ ಇತರ ಚುನಾಯಿತ ಪ್ರತಿನಿಧಿಗಳು ಮುಖ್ಯಮಂತ್ರಿ ಪರಮಾಧಿಕಾರ ಪ್ರಶ್ನಿಸುವುದು ಸರಿಯಲ್ಲ’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಾರಜೋಳ, ಈಶ್ವರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ನಿರ್ದೇಶನದಂತೆ ಒಮ್ಮತದಿಂದ ಸಚಿವ ಸಂಪುಟ ಕೆಲಸ ಮಾಡುತ್ತಿದೆ. 33 ಇಲಾಖೆಗಳಿಗೂ ಮುಖ್ಯಮಂತ್ರಿ ಬಜೆಟ್‌ನಲ್ಲಿ ಅನುದಾನ ಹಂಚಿರುತ್ತಾರೆ. ಎಲ್ಲ ವಿಧಾನಸಭಾ ಕ್ಷೇತ್ರಗಳಿಗೂ ಬೇಡಿಕೆ ಇರುವಷ್ಟು ಅನುದಾನ ಕೊಡಲಾಗುವುದಿಲ್ಲ. ಹೆಚ್ಚಿಗೆ ಬೇಕಾದರೆ ನೀವೇ ಮುಖ್ಯಮಂತ್ರಿ ಭೇಟಿಯಾಗಿ ಕೇಳಬೇಕು ಎಂದು ನಮ್ಮ ಬಳಿ ಬರುವ ಶಾಸಕರು ಅಥವಾ ಸಂಸದರಿಗೆ ನಾವೇ ಹೇಳುತ್ತೇವೆ. ಇದು ಈ ಸರ್ಕಾರದಲ್ಲಷ್ಟೆ ಅಲ್ಲ. ಹಿಂದಿನಿಂದಲೂ ನಡೆದು ಬಂದಿದೆ. ಶಾಸಕರ ಬೇಕು-ಬೇಡಗಳನ್ನು ನೋಡಿ ಮುಖ್ಯಮಂತ್ರಿ ನಿರ್ಧರಿಸುತ್ತಾರೆ’ ಎಂದು ಅವರು ಹೇಳಿದ್ದಾರೆ.

‘ಸಮಸ್ಯೆಗಳೇನೇ ಇದ್ದರೂ ಸಂಪುಟ ಸಭೆಯಲ್ಲೇ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಮುಸುಕಿನ ಗುದ್ದಾಟವೇನಿಲ್ಲ. ಈಶ್ವರಪ್ಪ ಅವರು ಯಾವ ವಿಚಾರ ಇಟ್ಟುಕೊಂಡು ಪತ್ರ ಬರೆದಿದ್ದಾರೋ ಗೊತ್ತಿಲ್ಲ. ಸಚಿವರು ಮುಖ್ಯಮಂತ್ರಿ ನಿರ್ದೇಶನದಂತೆ ಕೆಲಸ ಮಾಡಬೇಕು’ ಎಂದರು.



Join Whatsapp